ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರಾಗಿದ್ದ ರಮೇಶ್ ಜಾರಕಿಹೊಳಿ, ಉಪ ಚುನಾವಣೆಯಲ್ಲಿನ ಗೆಲುವಿನ ನಂತರ ತಾವು ಬಯಸಿದಂತೆ ಯಡಿಯೂರಪ್ಪನವರ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ ಗಿಟ್ಟಿಸಿಕೊಂಡಿದ್ದಾರೆ.
ಇದೀಗ ರಮೇಶ್ ಜಾರಕಿಹೊಳಿ ಬಿಜೆಪಿ ಕೇಂದ್ರ ವರಿಷ್ಠರ ಮುಂದೆ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆನ್ನಲಾಗಿದ್ದು, ಇದು ಬಿಜೆಪಿ ನಾಯಕರಿಗೆ ತಲೆನೋವು ತಂದಿದೆ ಎನ್ನಲಾಗಿದೆ. ಹೌದು, ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ತಮಗೆ ಮಾತು ಕೊಟ್ಟಂತೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ರಮೇಶ್ ಜಾರಕಿಹೊಳಿ ಅಹವಾಲು ಮಂಡಿಸಿದ್ದು, ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ಜೊತೆ ವಿಧಾನಪರಿಷತ್ ಸದಸ್ಯ ಯೋಗೀಶ್ವರ್ ಸಹ ನವದೆಹಲಿಗೆ ತೆರಳಿದ್ದು, ತಮಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ. ಕೊರೊನಾ ಸಂಕಷ್ಟ, ಕರ್ನಾಟಕದಲ್ಲಿನ ಪ್ರವಾಹ ಪರಿಸ್ಥಿತಿ ಹಾಗೂ ಬೆಂಗಳೂರಿನ ಡಿಜೆ ಹಳ್ಳಿ ಗಲಭೆ ಪ್ರಕರಣದ ನಡುವೆ ಅಧಿಕಾರ ಪಡೆಯಲು ಇವರುಗಳು ಲಾಬಿ ನಡೆಸುತ್ತಿರುವುದು ಬಿಜೆಪಿ ಕೇಂದ್ರ ನಾಯಕರಿಗೆ ಇರುಸುಮುರುಸು ತಂದಿದೆ ಎನ್ನಲಾಗಿದೆ.