ಬೆಂಗಳೂರು: ರಾಜ್ಯದ ಮೂವರು ಸಚಿವರಾದ ಶ್ರೀರಾಮುಲು, ಡಾ.ಕೆ ಸುಧಾಕರ್ ಹಾಗೂ ಗೋವಿಂದ ಕಾರಜೋಳ ಅವರ ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದ್ದು, ನೂತನ ಖಾತೆ ಹಂಚಿಕೆಗೆ ರಾಜ್ಯಪಾಲ ವಜುಭಾಯಿ ವಾಲ ಅಂಕಿತ ಹಾಕಿದ್ದಾರೆ.
ಆರೋಗ್ಯ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಎರಡೂ ಖಾತೆಯನ್ನು ವಾಪಸ್ ಪಡೆದ ಸಿಎಂ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಆರೋಗ್ಯ ಖಾತೆಯನ್ನು ಹೆಚ್ಚುವರಿಯಾಗಿ ನೀಡಿ ಆದೇಶ ಹೊರಡಿಸಿದ್ದಾರೆ. ಹಿಂದುಳಿದ ವರ್ಗಗಳ ಖಾತೆಯನ್ನು ಸಿಎಂ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಖಾತೆ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರಿಂದ ಸಮಾಜ ಕಲ್ಯಾಣ ಖಾತೆ ಹಿಂಪಡೆದು ಬಿ.ಶ್ರೀರಾಮುಲು ಅವರಿಗೆ ನೀಡಿದ್ದಾರೆ. ಕಾರಜೋಳ ಅವರು ಲೋಕೋಪಯೋಗಿ ಸಚಿವರಾಗಿ ಮುಂದುವರೆಯಲಿದ್ದಾರೆ.
ನೂತನ ಖಾತೆ ಹಂಚಿಕೆ ಪ್ರಕ್ರಿಯೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಶ್ರೀರಾಮುಲು ಅವರಿಗೆ ಬಿಗ್ ಶಾಕ್ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.