ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸಂಪುಟ ವಿಸ್ತರಣೆ ಮಾಡುತ್ತಿದ್ದಂತೆ ಸಚಿವ ಸ್ಥಾನ ವಂಚಿತ ಆಕಾಂಕ್ಷಿಗಳ ಅಸಮಾಧಾನ ಭುಗಿಲೆದ್ದಿದೆ. ಅದರಲ್ಲೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮೊದಲಾದವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕುತ್ತಿದ್ದು, ಇದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪರಿಷತ್ ಸದಸ್ಯ ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ನೀಡಿರುವುದು ರೇಣುಕಾಚಾರ್ಯರನ್ನು ಕೆರಳಿಸಿದ್ದು, ವರಿಷ್ಠರಿಗೆ ದೂರು ನೀಡಲು ದೆಹಲಿಗೆ ತೆರಳಿದ್ದಾರೆ. ಇನ್ನು ಯಡಿಯೂರಪ್ಪ ವಿರುದ್ಧ ಈ ಮೊದಲಿನಿಂದಲೂ ಪದೇ ಪದೇ ಕಿಡಿಕಾರುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಕೆಲವರು ಸಿಡಿ ಇಟ್ಟುಕೊಂಡು ಯಡಿಯೂರಪ್ಪರನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಈ ಸಿಡಿಗಳ ಪೈಕಿ ನೋಡಬಾರದಾ ಸಿಡಿಯೂ ಇದೆ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ವಿಧಾನಸಭಾ ಉಪಚುನಾವಣೆಯಲ್ಲಿ ಪರಾಭವಗೊಂಡರೂ ಸಹ ಹೆಚ್. ವಿಶ್ವನಾಥ್ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದ್ದು, ಇಷ್ಟಾದರೂ ಸಚಿವರಾಗುವ ಬಯಕೆ ಹೊಂದಿರುವ ವಿಶ್ವನಾಥ್ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೊತೆಗೆ ಸಿಡಿ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಸಹ ಹೈಕಮಾಂಡ್ ನಾಯಕರು ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.