ಬೆಂಗಳೂರು: ಸಂಪುಟ ವಿಸ್ತರಣೆ ಗಡುವು ವಿಸ್ತರಣೆಯಾಗುತ್ತಿದ್ದಂತೆ ರಾಜ್ಯ ರಾಜಕೀಯ ಚಟುವಟಿಗಳು ಕುತೂಹಲ ಪಡೆದುಕೊಂಡಿದ್ದು, ಸಿಎಂ ಬಿ ಎಸ್ ಯಡಿಯೂರಪ್ಪ ಇನ್ನು ಮೂರು ದಿನಗಳಲ್ಲಿ ಮತ್ತೆ ದೆಹಲಿಗೆ ತೆರಳುವುದಾಗಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಮೂರು ದಿನಗಳಲ್ಲಿ ಮತ್ತೆ ದೆಹಲಿಗೆ ತೆರಳುತ್ತಿದ್ದು, ವಾಪಸ್ ಬಂದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಸಿ.ಟಿ ರವಿಯಿಂದ ತೆರವಾಗುವ ಸ್ಥಾನಕ್ಕೆ ಬೆಂಗಳೂರಿನ ಪ್ರಭಾವಿ ದಲಿತ ನಾಯಕ ಅರವಿಂದ ಲಿಂಬಾವಳಿ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ.
ಅಲ್ಲದೇ ಸಂಪುಟದಲ್ಲಿನ ಹಳಬರನ್ನು ಕೈಬಿಟ್ಟು ಹೊಸಬರಿಗೆ ಸ್ಥಾನ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರಾದ ಶಶಿಕಲಾ ಜೊಲ್ಲೆ, ಸಿ.ಸಿ ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಕೊಕ್ ನೀಡುವ ಸಾಧ್ಯತೆಯಿದೆ. ಶಶಿಕಲಾ ಜೊಲ್ಲೆ ಸ್ಥಾನವನ್ನು ಉಮೇಶ್ ಕತ್ತಿ ಅವರಿಗೆ, ಸಿ.ಸಿ ಪಾಟೀಲ್ ಸ್ಥಾನವನ್ನು ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಸ್ಥಾನವನ್ನು ಸುನೀಲ್ ಕುಮಾರ್ ಅವರಿಗೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.