ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ಎಲ್ಲಿಗೂ ಓಡಿ ಹೋಗಿರಲಿಲ್ಲ. ಅವರಿಗೆ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಓಡಿ ಹೋಗಿದ್ದರು ಎಂಬುದು ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪತ್ ರಾಜ್ ಆಗಲಿ, ಡಿ.ಕೆ. ಶಿವಕುಮಾರ್ ಆಗಲಿ ಯಾರೇ ಆದರೂ ಕಾನೂನಿಗೆ ಗೌರವ ಕೊಡಲೇಬೇಕು. ಸಂಪತ್ ಕೂಡ ಕಾನೂನಿಗೆ ಗೌರವ ಕೊಡುತ್ತಾರೆ. ವೈಯಕ್ತಿಕ ಹೇಳಿಕೆ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲಾಗದು ಎಂದರು.
ಬಿಜೆಪಿಯ ಹಲವು ನಾಯಕರು ಅಧಿಕಾರ ಹಾಗೂ ಕಾನೂನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರ ಮೇಲೆ ಅನಗತ್ಯ ಆರೋಪಗಳನ್ನು ಮಾಡಿ, ನಮ್ಮನ್ನು ರಾಜಕೀಯವಾಗಿ ಮುಗಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಈಗಲಾದರೂ ಡಿಕೆಶಿ ತಮ್ಮ ಪರವಾಗಿ ನಿಲ್ಲಲಿ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಅಖಂಡ ಅವರು ಮೊದಲು ನನ್ನ ಬಳಿ ಬಂದು ಮಾತನಾಡಲಿ, ಈವರೆಗೂ ಅವರು ನನ್ನ ಬಳಿ ಚರ್ಚೆ ನಡೆಸಿಲ್ಲ. ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಿರಬಹುದು, ಆದರೆ ನನ್ನ ಬಳಿ ಬಂದು ಒಮ್ಮೆ ಚರ್ಚೆ ಮಾಡಲಿ ನಂತರ ನೋಡೋಣ ಎಂದು ಹೇಳಿದರು.