ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಡ್ರಗ್ಸ್ ದಂಧೆಯ ಕರಾಳ ಮುಖ ಮೊಗೆದಷ್ಟು ಹೊರಬರುತ್ತಲೇ ಇದೆ. ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಶ್ರೀಲಂಕಾದಲ್ಲಿ ಆಯೋಜಿಸುವ ಕ್ಯಾಸಿನೋ ಪಾರ್ಟಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದರು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಶ್ರೀಲಂಕಾದಲ್ಲಿ ಫಾಝಿಲ್ ಹಾಗೂ ನಯಾಜ್ ಕ್ಯಾಸಿನೋ ಪಾರ್ಟಿ ಏರ್ಪಡಿಸುತ್ತಿದ್ದರು. ಈ ಪಾರ್ಟಿಗೆ ಸೆಲೆಬ್ರಿಟಿಗಳು, ಉದ್ಯಮಿಗಳು ಹಾಗೂ ರಾಜಕಾರಣಿಗಳು ಮಾತ್ರ ಭಾಗವಹಿಸುವ ವ್ಯವಸ್ಥೆ ಮಾಡಲಾಗುತ್ತಿತ್ತು. ಯಾರೆಲ್ಲ ಕ್ಯಾಸಿನೋ ಪಾರ್ಟಿಗೆ ಬರಬೇಕು ಎಂಬ ಬಗ್ಗೆ ಸಂಜನಾ ಎ, ಬಿ, ಸಿ ಎಂಬ ಮೂರು ವಿಧಗಳ ಪಟ್ಟಿ ತಯಾರಿಸುತ್ತಿದ್ದರು. ಇದರಲ್ಲಿ ಸೆಲೆಬ್ರಿಟಿಗಳ ಪ್ಯಾಕೇಜ್ ನ್ನು ಸಂಜನಾ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಈ ಪ್ಯಾಕೇಜ್ ನಲ್ಲಿ ನಟಿಯರು ಹಾಗೂ ಮಾಡೆಲ್ ಗಳನ್ನು ಬೆಂಗಳೂರಿನಿಂದ ಪಿಕಪ್ ಮಾಡುವುದರಿಂದ ಅವರ ಫ್ಲೈಟ್ ಟಿಕೆಟ್, ಶ್ರೀಲಂಕಾದಲ್ಲಿ ವಾಸ್ತವ್ಯದ ವ್ಯವಸ್ಥೆ, ಖರ್ಚು ವೆಚ್ಚ ಹಾಗೂ ಅವರಿಗೆ ನೀಡುವ ಪೇಮೆಂಟ್ ಎಲ್ಲವನ್ನೂ ಸಂಜನಾ ನೋಡಿಕೊಳ್ಳುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎನ್ನಲಾಗಿದೆ.