ರಾಯಚೂರು: ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಎಂಎಲ್ಸಿ ಹೆಚ್. ವಿಶ್ವನಾಥ್ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದ್ದಾರೆ. ಸಿಎಂ ಯಡಿಯೂರಪ್ಪ ಕೊಟ್ಟ ಮಾತು ತಪ್ಪಿದ್ದು, ಭ್ರಷ್ಟರಿಗೆ ಮಣೆ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ವಿಶ್ವನಾಥ್, ಸಿಎಂ ಯಡಿಯೂರಪ್ಪ ದಲಿತ ನಾಯಕ ನಾಗೇಶ್ ಅವರ ರಾಜೀನಾಮೆ ಪಡೆದುಕೊಂಡಿದ್ದಾರೆ. ಹಿಂದುಳಿದ ವರ್ಗದ ಮುನಿರತ್ನ ಅವರನ್ನು ಕಡೆಗಣಿಸಿದ್ದಾರೆ. ಈ ಇಬ್ಬರನ್ನೂ ಕಡೆಗಣಿಸಿ ಭ್ರಷ್ಟನಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಕಾಣೆಯಾಗಿದ್ದ ವ್ಯಕ್ತಿಯನ್ನು ಹುಡುಕಿ ತಂದು ಮಣೆ ಹಾಕಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಯಾಕೆ ಬೆಂಬಲ ನೀಡುತ್ತಿದ್ದಾರೆ ಗೊತ್ತಿಲ್ಲ. ಭ್ರಷ್ಟರನ್ನು ಕೂರಿಸಿಕೊಂಡು ಸಿಎಂ ಹೇಗೆ ಆಡಳಿತ ನಡೆಸುತ್ತಾರೆ? ಭ್ರಷ್ಟರಿಗೆ ಅಧಿಕಾರ ಕೊಡಲಾ ನಾವು ಬಂಡಾಯವೆದ್ದು ರಾಜೀನಾಮೆ ನೀಡಿ ಬಂದಿದ್ದು? ಎಂದು ಪ್ರಶ್ನಿಸಿದ್ದಾರೆ.
ಸಂಕ್ರಮಣದ ನಂತರ ಸಿಡಿ ಬ್ಲಾಸ್ಟ್ ಆಗುತ್ತೆ. ಒಬ್ಬೊಬ್ಬರು ಒಂದೊಂದು ಸಿಡಿ ಬಿಡುಗಡೆ ಮಾಡ್ತಾರೆ. ವಿಜಯೇಂದ್ರ ಹಸ್ತಕ್ಷೇಪದಿಂದಲೇ ಶಾಸಕರು ಬಂಡೆದ್ದಿದ್ದಾರೆ. ಬಿಜೆಪಿಗೆ ಈಗ ‘ಸನ್’ ಸ್ಟ್ರೋಕ್ ಬಡಿದಿದೆ. ಹಿಂದೆ ಜನತಾ ಪರಿವಾರ್ ಸನ್ ಸ್ಟ್ರೋಕ್ ನಿಂದ ಮುಗಿದು ಹೋಯ್ತು. ಕಾಂಗ್ರೆಸ್ ಕೂಡ ಸನ್ ಸ್ಟ್ರೋಕ್ ನಿಂದಲೇ ಹಾಳಾಯ್ತು. ಈಗ ಬಿಜೆಪಿ ಕೂಡ ಸನ್ ಸ್ಟ್ರೋಕ್ ನಿಂದಲೇ ಹಾಳಾಗ್ತಿದೆ. ವಿಜಯೇಂದ್ರ ಹಸ್ತಕ್ಷೇಪದಿಂದಲೇ ಶಾಸಕರು ಬಂಡೆದ್ದಿದ್ದಾರೆ. ಕುಟುಂಬ ರಾಜಕಾರಣದಿಂದ ಬಿಎಸ್ವೈ ಹಾಳಾಗುತ್ತಿದ್ದಾರೆ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.