ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ. ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ಇದರ ಕರಿನೆರಳು ಬಿದ್ದಿದ್ದು, ಅದರಲ್ಲೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಣ ಕ್ಷೇತ್ರ ತತ್ತರಿಸಿಹೋಗಿದೆ. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಕಾರಣ ಕಳೆದ ಮೂರು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ – ಕಾಲೇಜುಗಳು ಬಂದ್ ಆಗಿವೆ.
ಹೀಗಾಗಿ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವವರ ಬದುಕು ಅತಂತ್ರವಾಗಿದೆ. ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಆರಂಭದಲ್ಲಿ ಶಿಕ್ಷಕರಿಗೆ ಸಂಬಳ ನೀಡಿದವಾದರೂ ಇದೀಗ ಸಂಬಳ ನೀಡಲು ಮೀನಾಮೇಷ ಎಣಿಸುತ್ತಿವೆ. ಕೆಲವರು ಅರ್ಧ ಸಂಬಳ ನೀಡುವುದಾಗಿ ಹೇಳುತ್ತಿದ್ದು, ಮುಂದಿನ ಬದುಕಿನ ಚಿಂತೆಯಲ್ಲಿ ಶಿಕ್ಷಕರಿದ್ದಾರೆ.
ಆನ್ಲೈನ್ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆಯಾದರೂ ಶಿಕ್ಷಣ ಸಂಸ್ಥೆಗಳು ಕೆಲವರನ್ನಷ್ಟೇ ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿವೆ. ಹೀಗಾಗಿ ಇತರ ಶಿಕ್ಷಕರಿಗೆ ಭವಿಷ್ಯದ ಆತಂಕ ಶುರುವಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳ ಸಮಸ್ಯೆ ಪರಿಹರಿಸಲು ಯತ್ನಿಸಬೇಕು ಎಂಬುದು ಎಲ್ಲರ ಮನವಿಯಾಗಿದೆ.