ಮೈಸೂರು: ಸಚಿವ ಶ್ರೀರಾಮುಲು ಬಳಿಯಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಇದು ಶ್ರೀರಾಮುಲು ಅವರಿಗೆ ಕಳಂಕ ತರುವ ವಿಷಯವಲ್ಲ, ಆಡಳಿತಾತ್ಮಕ ಪ್ರಕ್ರಿಯೆ ಅಷ್ಟೇ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವರು, ಖಾತೆ ಬದಲಾವಣೆ ಬಗ್ಗೆ ಶ್ರೀರಾಮುಲು ಅವರಿಗೆ ಯಾವುದೇ ಬೇಸರವಿಲ್ಲ ಎಂದು ಭಾವಿಸುತ್ತೇನೆ. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಎರಡೂ ಒಂದೇ ವಿಭಾಗ. ಹೀಗಾಗಿ ಎರಡೂ ಖಾತೆ ಒಬ್ಬರ ಬಳಿಯೇ ಇರಬೇಕು. ಎರಡು ಖಾತೆ ಬೇರ್ಪಡಿಸಿದರೆ ನಿರ್ವಹಣೆ ಕಷ್ಟವಾಗುತ್ತದೆ. ಹಾಗಾಗಿ ಇದೀಗ ಒಬ್ಬರಿಗೆ ಈ ಎರಡೂ ಖಾತೆ ವಹಿಸಿದ್ದಾರೆ ಎಂದರು.
ಅಲ್ಲದೇ ಈ ಹಿಂದೆ ಶ್ರೀರಾಮುಲು ಸಮಾಜ ಕಲ್ಯಾಣ ಖಾತೆ ನೀಡುವಂತೆ ಸಿಎಂ ಯಡಿಯೂರಪ್ಪ ಬಳಿ ಬೇಡಿಕೆ ಇಟ್ಟಿದ್ದರು. ಹಾಗಾಗಿ ಈಗ ಆ ಖಾತೆಯನ್ನು ಅವರಿಗೆ ನೀಡಲಾಗಿದೆ ಎಂದು ಹೇಳಿದರು.
ಇನ್ನು ತಮಗೆ ವೈದ್ಯಕೀಯ ಶಿಕ್ಷಣದ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಿರುವುದು ಸಂತಸ ತಂದಿದೆ. ಸಿಎಂ ನನ್ನ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿ ನೀಡಿದ್ದಾರೆ. ಕೊರೊನಾ ಸೋಂಕು ನಿಯಂತ್ರಣ ಹಾಗೂ ಜನರಿಗೆ ಸುಲಭವಾಗಿ ಚಿಕಿತ್ಸೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.