ಕೊರೊನಾ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಮ್ಮ ರಾಜ್ಯದಲ್ಲಿ ಪ್ರತಿ ನಿತ್ಯ ಸುಮಾರು 9 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಲೇ ಇದೆ. ಯಾವ ವರ್ಗದ ಜನರನ್ನೂ ಕೊರೊನಾ ಬಿಟ್ಟಿಲ್ಲ.
ಇದೀಗ ಈ ಕೊರೊನಾ ಮಹಾಮಾರಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ತಗುಲಿದೆ. ಸದಾ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಪ್ರಮೋದ್ ಮುತಾಲಿಕ್ ಅವರಿಗೆ ಇದೀಗ ಸೋಂಕು ತಗುಲಿದ್ದು, ಬೆಂಗಳೂರಿನ ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯ ಪ್ರವಾಸದಲ್ಲಿದ್ದಾಗ ಜ್ವರ ಕಾಣಿಸಿಕೊಂಡಿತ್ತಂತೆ. ಈ ವೇಳೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ಆಗ ಸೋಂಕು ತಗುಲಿರುವುದು ಧೃಡಪಟ್ಟಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಮೈಸೂರು ಪ್ರವಾಸ ಸೇರಿದಂತೆ ಹಲವಾರು ಕಡೆ ಭೇಟಿ ನೀಡಿ ಗಣ್ಯರ ಜೊತೆ ಒಂದಿಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು.