ಚಿಕ್ಕಬಳ್ಳಾಪುರ: ಶೋಕಿ ಜೀವನದ ಆಸೆಗಾಗಿ ಹೆತ್ತ ಮಗುವನ್ನೇ ತಂದೆ-ತಾಯಿ ಮಾರಾಟ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ ಈ ಮಗು ಮಾರಾಟಕ್ಕೆ ಮಹಿಳಾ ಹೋಮ್ ಗಾರ್ಡ್ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು ಎನ್ನುವುದು.
ತಿಣಕಲ್ಲು ಗ್ರಾಮದ ಮಹಾಲಕ್ಷ್ಮಿ ಹಾಗೂ ನರಸಿಂಹ ಮೂರ್ತಿ ಮಗು ಮಾರಾಟ ಮಾಡಿದ ಆರೋಪಿಗಳು. ಹೊಸ ಬೈಕ್ ಹಾಗೂ ಮೊಬೈಲ್ ಗಾಗಿ ತಮ್ಮ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಶಿಡ್ಲಘಟ್ಟದ ದಂಪತಿಗೆ ಲಕ್ಷಾಂತರ ರೂ ಗೆ ಮಾರಾಟ ಮಾಡಿದ್ದಾರೆ. ಈ ಕೃತ್ಯದಲ್ಲಿ ಮಹಿಳಾ ಹೋಮ್ ಗಾರ್ಡ್ ಬೆಂಬಲವೂ ಇತ್ತು ಎನ್ನಲಾಗಿದೆ.
ಖಚಿತ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವನ್ನು ರಕ್ಷಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಪಡೆದಿದ್ದ ದಂಪತಿ ವಿಚಾರಿಸಿದಾಗ ಮಗುವಿನ ತಂದೆ-ತಾಯಿ ಮಗು ಸಾಕಲು ಅಶಕ್ತರಾಗಿದ್ದರಿಂದ ತಾವು ಪಡೆದಿದ್ದಾಗಿ ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮಗುವಿನ ತಂದೆ ಪರಾರಿಯಾಗಿದ್ದಾರೆ. ಶಿಡ್ಲಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.