ದಿನದಿಂದ ದಿನಕ್ಕೆ ಸಚಿವ ಸಂಪುಟ ತಿಕ್ಕಾಟ ಹೆಚ್ಚಾಗುತ್ತಿದೆ. ಬಿಜೆಪಿ ಮೂಲ ಹಾಗೂ ವಲಸಿಗ ಶಾಸಕರ ನಡುವೆ ಪರೋಕ್ಷವಾಗಿ ಹೇಳಿಕೆಗಳು, ಮುನಿಸು ಹೊರ ಬರುತ್ತಲೇ ಇದ್ದಾವೆ. ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸಚಿವ ಸಂಪುಟ ಸಂಬಂಧ ವಲಸಿಗರ ಮೇಲೆ ಹರಿಹಾಯ್ದಿದ್ದಾರೆ.
ಹೌದು, ಇಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ನಾವು 105 ಶಾಸಕರು ಗೆದ್ದಿರೋದ್ರಿಂದಲೇ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಯಾರೋ ಒಬ್ಬರಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ. ಪಕ್ಷದ ಕಾರ್ಯಕರ್ತರ ಶ್ರಮದಿಂದ ಸರ್ಕಾರ ರಚನೆ ಆಗಿದೆ. ಇನ್ನು ಬಿಜೆಪಿಗೆ ಸೇರಿದ 17 ಶಾಸಕರ ಕೊಡುಗೆಯನ್ನು ಗೌರವಿಸುತ್ತೇನೆ. ಆದರೆ 105 ಶಾಸಕರು ಗೆದ್ದಿರದಿದ್ರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಯಡಿಯೂರಪ್ಪ, ಮೋದಿ, ಅಮಿತ್ ಶಾ ಮತ್ತು ಕಾರ್ಯಕರ್ತರ ಶ್ರಮ, ತ್ಯಾಗದಿಂದ ಪಕ್ಷ ಇನ್ನೂ ಗಟ್ಟಿಯಾಗಿದೆ. ಇದನ್ನು ಎಂದಿಗೂ ಯಾರು ಮರೆಯಬಾರದು. ತನ್ನೊಬ್ಬನಿಂದಾಗಿ ಈ ಸರ್ಕಾರ ಬಂತೆಂದು ಯಾರು ಅಂದ್ಕೊಂಡಿದ್ದಾರೋ ಅವರಿಗೆ ನಾನು ಈ ಮಾತು ಹೇಳೋಕೆ ಬಯಸುತ್ತೇನೆ ಎಂದು ಪರೋಕ್ಷವಾಗಿ ವಲಸಿಗ ಶಾಸಕರಿಗೆ ರೇಣುಕಾಚಾರ್ಯ ಟಾಂಗ್ ನೀಡಿದರು.
ಇನ್ನು ರೇಣುಕಾಚಾರ್ಯ ಮಾತಿಗೆ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ. ಇಲ್ಲಿ ವಲಸೆ, ಮೂಲ ಎಂಬ ಪ್ರಶ್ನೆ ಇಲ್ಲ. ನಾವೆಲ್ಲಾ ಒಂದೇ ಮನೆಯಲ್ಲಿರೊದು. ಆ ಪ್ರಶ್ನೆ ಒಂದೇ ಮನೆಯಲ್ಲಿ ಉದ್ಭವವಾಗಲ್ಲ. 105 ಜನನೂ ಮುಖ್ಯ, ಹಾಗೆಯೇ 17 ಮಂದಿಯೂ ಮುಖ್ಯ. ಎಲ್ಲರೂ ಸೇರಿದ್ದರಿಂದಲೇ ಸರ್ಕಾರ ಆಗಿದ್ದು. ಹಾಗಾದ್ರೆ 105 ಜನ ಇದ್ದಾಗ ಸರ್ಕಾರ ಏಕೆ ರಚನೆ ಆಗ್ಲಿಲ್ಲಾ ಎಂದು ರೇಣುಕಾಚಾರ್ಯರಿಗೆ ಪರೋಕ್ಷವಾಗಿ ಪ್ರಶ್ನೆ ಮಾಡಿದರು.