ವಿಜಯಪುರ: ಪಕ್ಷದಿಂದ ಹೊರಹಾಕುವ ಎಚ್ಚರಿಕೆ ನೀಡಿದರೂ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಯಡಿಯೂರಪ್ಪ ಪುತ್ರ ವ್ಯಾಮೋಹದಲ್ಲಿ ಮುಳುಗಿದ್ದಾರೆ. ಅದಕ್ಕಾಗಿ ಚುನಾವಣೆಯಲ್ಲಿ ಹಣ ಹಂಚಲು ಬಿಟ್ಟಿದ್ದಾರೆ ಎಂದು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಬಿ.ವೈ.ವಿಜಯೇಂದ್ರ ಬಳಿ ಹಣವಿದೆ ಆದರೆ ನಾಯಕತ್ವದ ಗುಣಗಳಿಲ್ಲ. ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ಶೀಘ್ರದಲ್ಲಿ ಅವರ ಫೆಡರಲ್ ಬ್ಯಾಂಕ್ ಹಗರಣ ಹೊರಬರಲಿದೆ. ವಿದೇಶದಲ್ಲಿ ಸಾವಿರಾರು ಕೋಟಿ ಹಣ ಇಟ್ಟಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮೇ ಎರಡರೊಳಗೆ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ. ಯತ್ನಾಳ್ ಸಿಎಂ ಆಗ್ತಾರೋ ಅಥವಾ ಬೇರೆಯವರು ಆಗ್ತಾರೋ ಗೊತ್ತಿಲ್ಲ. ಆದರೆ ಬದಲಾವಣೆಯಾಗುವುದು ಮಾತ್ರ ಖಚಿತ ಎಂದರು.
ಒಳಗೊಳಗೆ ಕಾಲೆದುಕೊಳ್ಳುತ್ತಿರುವ ಸಿದ್ಧರಾಮಯ್ಯ, ಡಿಕೆಶಿ: ಕಾಂಗ್ರೆಸ್ ಧೂಳೀಪಟ; ಸದಾನಂದಗೌಡ
ಇದೇ ವೇಳೆ ಸಾರಿಗೆ ನೌಕರರನ್ನು ಕೊಡಿಹಳ್ಳಿ ಚಂದ್ರಶೇಖರ್ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಮುಷ್ಕರದಿಂದ ಜನರಿಗೆ ತೊಂದರೆಯಾಗುತ್ತಿದೆ. ಕೋಡಿಹಳ್ಳಿಗೆ ಇದು ಸಂಬಂಧವಿರದ ವಿಚಾರ. ಹೊರಗಿನವರನ್ನು ತಂದು ಅಧ್ಯಕ್ಷರನ್ನಾಗಿ ಮಾಡಿರುವುದೇ ಸರಿಯಿಲ್ಲ ಎಂದು ಹೇಳಿದರು.
ಸಾರಿಗೆ ನೌಕರರದ್ದು ಒಂದು ಸಂಸ್ಥೆ. ಎಲ್ಲರನ್ನೂ ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ. ನಾನು ಸಿಎಂ ಆದರೂ ಮಾಡಲಾಗಲ್ಲ. ರಾಜ್ಯ ಸರ್ಕಾರ ನೌಕರರ ಸರಿಯಾಗಿ ನಿಭಾಯಿಸುತ್ತಿಲ್ಲ. ಮೂರು ತಿಂಗಳ ಹಿಂದೆಯೇ 6ನೇ ವೇತನ ಆಯೋಗ , ಸರ್ಕಾರಿ ನೌಕರರಾಗಿ ಪರಿಗಣನೆ ಸಾಧ್ಯವಿಲ್ಲ ಎಂದು ಹೇಳಬೇಕಿತ್ತು. ಇಡೀ ಸಾರಿಗೆ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದರು.