ಬೆಂಗಳೂರು: ವಿಧಾನ ಪರಿಷತ್ ಕಲಾಪ ರಣಾಂಗಣವಾಗಿ ಮಾರ್ಪಟ್ಟಿದ್ದು, ಮೇಲ್ಮನೆಯಲ್ಲಿ ಜನಪ್ರತಿನಿಧಿಗಳೇ ಕಿತ್ತಾಡಿಕೊಡಿದ್ದಾರೆ. ಉಪಸಭಾಪತಿಯನ್ನು ಎಳೆದಾಡಿದ್ದಲ್ಲದೇ ಪರಸ್ಪರ ಕೊರಳಪಟ್ಟಿ ಹಿಡಿದುಕೊಂಡು ನೂಕಾಟ-ತಳ್ಳಾಟ ನಡೆಸಿದ್ದಾರೆ. ಉಪಸಭಾಪತಿ ಶಿಷ್ಟಾಚಾರ ಉಲ್ಲಂಘನೆಯೇ ಸಂಘರ್ಷಕ್ಕೆ ಕಾರಣ ಎನ್ನಲಾಗಿದೆ.
ವಿಧಾನ ಪರಿಷತ್ ಕಲಾಪದಲ್ಲಿ ಶಿಷ್ಠಾಚಾರ ಉಲ್ಲಂಘನೆಯಾಗಿದ್ದು, ಬೆಲ್ ಮುಗಿಯುವ ಮೊದಲೇ ಉಪಸಭಾಪತಿ ಧರ್ಮೇಗೌಡ ಸಭಾಪತಿ ಪೀಠವನ್ನು ಅಲಂಕರಿಸಿದ್ದು ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಬೆಲ್ ಮುಗಿದ ಬಳಿಕ ಮಾರ್ಷಲ್ ಬಂದು ತಿಳಿಸಿದ ನಂತರ ಸಭಾಪತಿ ಅಥವಾ ಉಪಸಭಾಪತಿ ಪೀಠದಲ್ಲಿ ಆಸೀನರಾಗಬೇಕು. ಆದರೆ ಉಪಸಭಾಪತಿ ಶಿಷ್ಠಾಚಾರ ಉಲ್ಲಂಘಿಸಿ, ಬಿಜೆಪಿ ಯೋಜನೆಯಂತೆ ನೇರವಾಗಿ ಬಂದು ಸಭಾಪತಿ ಕುರ್ಚಿಯಲ್ಲಿ ಕುಳಿತಿದ್ದಾರೆ. ಇದರಿಂದ ಕಾಂಗ್ರೆಸ್ ಸದಸ್ಯರ ಅಸಮಾಧಾನ ಭುಗಿಲೆದ್ದಿದ್ದು, ಉಪಸಭಾಪತಿಯನ್ನು ಎಳೆದಾಡಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಸದನದಲ್ಲಿ ನೂಕಾಟ ತಳ್ಳಾಟ ಆರಂಭವಾಗುತ್ತಿದ್ದಂತೆಯೇ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಕಲಾಪವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಿ ಆದೇಶ ನೀಡಿದ್ದಾರೆ. ಆದರೂ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಸಂಘರ್ಷ ಮುಂದುವರೆದಿದ್ದು, ಸಭಾಪತಿ ಸ್ಥಾನದಲ್ಲಿ ಯಾರೂ ಕೂರದಂತೆ ಗಲಾಟೆ ಮುಂದುವರೆಸಿದ್ದಾರೆ.