ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದು, ಚೆನ್ನಗಿರಿ ಮೂಲದ 70 ವರ್ಷದ ವೃದ್ದ ಮಹಿಳೆ ನಿನ್ನೆ ತಡ ರಾತ್ರಿ ಸಾವು ಕಂಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯಷ್ಟೆ ಮೆಗ್ಗಾನ್‍ನ ಕೋವಿಡ್-19 ಆಸ್ಪತ್ರೆಗೆ ಈ ಮಹಿಳೆಯನ್ನು ದಾಖಲಿಸಲಾಗಿತ್ತು.
ಶ್ವಾಸಕೋಶ ಮತ್ತು ಮೂಲವ್ಯಾದಿ ಸಮಸ್ಯೆಗೆ ಸಂಬಂಧಿಸಿದಂತೆ ಈ ಮಹಿಳೆ ಸ್ವತಃ ಅವರೇ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ಈ ಮಹಿಳೆಯ ಪ್ರಥಮ ಮತ್ತು ದ್ವಿತೀಯ ಸಂಪರ್ಕದ ಪರಿಶೀಲನೆಯನ್ನು ಆರೋಗ್ಯ ಇಲಾಖೆ ಮುಂದುವರೆಸಿದ್ದು, ಮೃತ ಮಹಿಳೆಯ ಮಗನಿಗೆ ಹೆಣ್ಣು ನೋಡಲು ಚೆನ್ನಗಿರಿಯಿಂದ ಹರಪನಹಳ್ಳಿಗೆ ಹೋಗಿ ಬಂದ ನಂತರದ ದಿನಗಳಲ್ಲಿ ಮಹಿಳೆಗೆ ಕೊರೋನಾ ಸೋಂಕು ತಗುಲಿರಬಹುದು ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಸಾವಿಗೆ ಸಂಬಂಧಿಸಿದಂತೆ ಮೃತ ಮಹಿಳೆ ಚನ್ನಗಿರಿ ಮೂಲದವರಾಗಿರುವುದರಿಂದ ಶಿವಮೊಗ್ಗ ಜಿಲ್ಲೆಯ ಕೊರೋನಾ ಪಟ್ಟಿಯಲ್ಲಿ ಸೇರಿಸಬೇಕೋ ಅಥವಾ ದಾವಣಗೆರೆ ಜಿಲ್ಲೆ ಪಟ್ಟಿಗೆ ಸೇರಿಸಬೇಕೋ ಎನ್ನುವ ಗೊಂದಲದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಇದ್ದು, ರಾಜ್ಯ ಆರೋಗ್ಯ ಇಲಾಖೆಯ ಆದೇಶಕ್ಕಾಗಿ ಕಾಯುತ್ತಿದೆ.
ಈ ಕೊರೋನಾ ಸಾವನ್ನು ಜಿಲ್ಲಾಧಿಕಾರಿಗಳು ಕೂಡ ದೃಢಪಡಿಸಿದ್ದು, ರಾಜ್ಯ ಪಟ್ಟಿಯಲ್ಲಿ ಇಂದು ಸಂಜೆಯ ಆರೋಗ್ಯ ಬುಲೆಟಿನ್‍ನಲ್ಲಿ ಬರಬೇಕಾಗಿದೆ.