ನವದೆಹಲಿ: ಶಿರಾ ಹಾಗೂ ಬೆಂಗಳೂರಿನ ಆರ್.ಆರ್. ನಗರ ಕ್ಷೇತ್ರಗಳ ಉಪಚುನಾವಣಾ ದಿನಾಂಕ ಘೋಷಣೆಯಾಗಿದ್ದು, ನವೆಂಬರ್ 3ರಂದು ಮತದಾನ ನಡೆಯಲಿದೆ. ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಅಕ್ಟೋಬರ್ 9ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದ್ದು, ಅ.16 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಅ.17ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.19ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಅ.9ರಂದು ಅಧಿಸೂಚನೆ ಹೊರಡಿಸಲಾಗುತ್ತಿದೆ.
ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ನಿಧನದಿಂದ ಶಿರಾ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಇನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಆರ್. ಆರ್ ನಗರ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಮುನಿರತ್ನ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಪರಾಜಿತ ಬಿಜೆಪಿ ಅಭ್ಯರ್ಥಿ ಮುನಿರಾಜು ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು. ಮುನಿರತ್ನ ಈಗ ಬಿಜೆಪಿಗೆ ಸೇರಿದ್ದು, ಹೈಕೋರ್ಟ್ ಮುನಿರಾಜು ಅರ್ಜಿ ವಜಾಗೊಳಿಸಿತ್ತು. ಇದೀಗ ಶಿರಾ ಹಾಗೂ ಆರ್.ಆರ್. ನಗರ ಕ್ಷೇತ್ರಗಳಿಗೆ ನ.3ರಂದು ಒಂದೇ ದಿನ ಉಪಚುನಾವಣೆ ನಡೆಯಲಿದೆ.
ಇದೇ ವೇಳೆ ವಿಧಾನ ಪರಿಷತ್ ಎರಡು ಪದವೀಧರ ಕ್ಷೇತ್ರಗಳಾದ ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಕೂಡ ಚುನಾವಣೆ ಘೋಷಣೆಯಾಗಿದ್ದು, ನಾಲ್ಕೂ ಕ್ಷೇತ್ರಗಳಿಗೆ ಅ.28ರಂದು ಮತದಾನ ನಡೆಯಲಿದೆ.