ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂಬುದು ಈವರೆಗೆ ಮರೀಚಿಕೆಯಂತೆಯಾಗಿತ್ತು. ಪ್ರತಿ ಬಾರಿಯೂ ಒಂದಿಲ್ಲೊಂದು ಕಾರಣದಿಂದ ವರ್ಗಾವಣೆ ಮುಂದೂಡಲಾಗುತ್ತಿದ್ದು, ಇದರಿಂದಾಗಿ ಶಿಕ್ಷಕ ಸಮುದಾಯ ಅಸಮಾಧಾನಗೊಂಡಿತ್ತು. ಆದರೆ ಇದೀಗ ಕೊನೆಗೂ ಮುಹೂರ್ತ ಕೂಡಿ ಬಂದಿದೆ.
ಹೌದು, ಕೊರೊನಾ ಕಾರಣಕ್ಕೆ ಈ ಬಾರಿಯೂ ವರ್ಗಾವಣೆ ಪ್ರಕ್ರಿಯೆ ಎಲ್ಲಿ ಮುಂದೂಡಲಾಗುತ್ತದೋ ಎಂಬ ಶಿಕ್ಷಕರ ಆತಂಕಕ್ಕೆ ಶಿಕ್ಷಣ ಇಲಾಖೆ ತೆರೆ ಎಳೆದಿದೆ. ಸೆಪ್ಟೆಂಬರ್ 25 ರಿಂದ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, ಇದೇ ಮೊದಲ ಬಾರಿಗೆ ಆದೇಶ ಪತ್ರವನ್ನು ‘ಶಿಕ್ಷಕ ಮಿತ್ರ’ ಆಪ್ ಮೂಲಕ ನೀಡಲಾಗುತ್ತದೆ.
ಸೆಪ್ಟೆಂಬರ್ 16 ರೊಳಗೆ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತಿದ್ದು, ಆ ಬಳಿಕ ಖಾಲಿ ಹುದ್ದೆಗಳ ಮಾಹಿತಿಯನ್ನು ‘ಶಿಕ್ಷಕ ಮಿತ್ರ’ ಆಪ್ ಗೆ ಅಪ್ಲೋಡ್ ಮಾಡಲಾಗುತ್ತದೆ. ಇದಾದ ಬಳಿಕ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.