ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ಸಂಬಂಧ ಸಿನಿ ವಿತರಕ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟಿರುವ ಬಗ್ಗೆ ಪ್ರಶಾಂತ್ ಸಂಬರಗಿ ಮೂರು ಬಾಂಬ್ ಸಿಡಿಸಿದ್ದರು. ಮಾಜಿ ಸಚಿವ ಜೀವರಾಜ್ ಆಳ್ವಾ ಅವರ ಪುತ್ರ ಆದಿತ್ಯ ಆಳ್ವಾ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ, ಶಾಸಕ ಜಮೀರ್ ಅಹ್ಮದ್ ಗೂ ಶ್ರೀಲಂಕಾ ಕ್ಯಾಸಿನೋ ನಂಟಿದೆ. ಅಲ್ಲದೇ ಸಂಜನಾ ಗಲ್ರಾಣಿ ಹಾಗೂ ಜಮೀರ್ ಅಹ್ಮದ್ ವಿರುದ್ಧವೂ ಆರೋಪ ಮಾಡಿದ್ದರು.
ಈ ಹಿನ್ನಲೆಯಲ್ಲಿ ಸಿಸಿಬಿ ಪ್ರಶಾಂತ್ ಸಂಬರಗಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದು, ವಿಚಾರಣೆಗಾಗಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಸಂಬರಗಿ ಹಾಜರಾಗಿದ್ದಾರೆ.
ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಮಾತನಾಡಿದ ಸಂಬರಗಿ, ಶಾಸಕ ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ. ಈ ಮೂಲಕ ಸರ್ಕಾರಕ್ಕೆ ಹೊಸ ಆದಾಯ ತಂದು ಕೊಡುತ್ತಿದ್ದೇನೆ. ನನ್ನ ಬಳಿಯಿರುವ ಫೈಲ್ ನಲ್ಲಿ ಎಲ್ಲಾ ದಾಖಲೆಗಳಿವೆ ಎಂದು ಹೇಳಿದ್ದಾರೆ.