ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಶಾಸಕರ ಭವನಕ್ಕೂ ಕಾಲಿಟ್ಟಿದೆ. ಹೀಗಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರ ಭವನ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.
ಶಾಸಕರ ಭವನದಲ್ಲಿ ಅನಗತ್ಯವಾಗಿ ತಂಗಿರುವವರನ್ನು ಹೊರಹಾಕಲು ನಿರ್ಧರಿಸಲಾಗಿದ್ದು, ಶಾಸಕರು ಬರುವ ವಾಹನದಲ್ಲಿ ಚಾಲಕ, ಆಪ್ತ ಸಹಾಯಕ ಹಾಗೂ ಅಂಗರಕ್ಷಕರಿಗೆ ಮಾತ್ರ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ.
ಅಲ್ಲದೆ ಶಾಸಕರ ಭವನ ಪ್ರವೇಶಿಸುವವರು ಮುಖ್ಯದ್ವಾರದ ಬಳಿ ಕಡ್ಡಾಯವಾಗಿ ಹೆಸರು, ಮೊಬೈಲ್ ಸಂಖ್ಯೆ, ಭೇಟಿ ಉದ್ದೇಶ ದಾಖಲಿಸಬೇಕಾಗಿದ್ದು, ಪ್ರಾಥಮಿಕ ತಪಾಸಣೆ ಬಳಿಕವೇ ಒಳ ಬಿಡಲಾಗುತ್ತದೆ.