ಕೊರೊನಾ ಮಹಾಮಾರಿಯಿಂದ ಶಾಲಾ – ಕಾಲೇಜುಗಳು ಇನ್ನೂ ಓಪನ್ ಆಗಿಲ್ಲ. ಈ ಮಧ್ಯೆ ಕಳೆದ 15 ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದೆ. ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಸೋಂಕಿತರು ಕಡಿಮೆಯಾಗುತ್ತಿದ್ದಂತೆಯೇ ಶಾಲಾ – ಕಾಲೇಜು ತೆರೆಯೋದಿಕ್ಕೆ ಸರ್ಕಾರ ಚಿಂತನೆ ಮಾಡುತ್ತಿದ್ದು, ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ.
ಕೊರೊನಾ ಕಡಿಮೆಯಾದರೂ ಲಸಿಕೆ ಇನ್ನೂ ಲಭ್ಯವಾಗಿಲ್ಲ ಇಂತಹ ಸಮಯದಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಶಾಲೆಗೆ ಕಳಿಸುವುದಾದರೂ ಹೇಗೆ ಎಂಬ ಪ್ರಶ್ನೆ ಪೋಷಕರದ್ದು. ಇತ್ತೀಚೆಗೆ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಯಿತು. ಸಭೆಯಲ್ಲಿಯೂ ಪೋಷಕರು ಆತಂಕ ವ್ಯಕ್ತಪಡಿಸಿದ್ದನ್ನು ವಿವರಿಸಲಾಗಿದೆ. ಹೀಗಿರುವಾಗ ಶಾಲೆ ಆರಂಭವಾದರೂ ಮಕ್ಕಳನ್ನು ಶಾಲೆಗೆ ಪೋಷಕರು ಕಳುಹಿಸುತ್ತಾರಾ ಎಂಬುದೇ ದೊಡ್ಡ ಪ್ರಶ್ನೆ.
ಮತ್ತೊಂದು ಕಡೆ ಮಕ್ಕಳು ಶಾಲೆಗೆ ಹೋಗದೇ ಇದ್ದರೆ ಬಾಲ್ಯ ವಿವಾಹ, ಕೂಲಿಗೆ ಮಕ್ಕಳನ್ನು ಬಳಸಿಕೊಳ್ಳುವುದು ಹೆಚ್ಚಾಗುತ್ತದೆ ಎನ್ನುವುದು ಹಲವರ ವಾದ. ಹೀಗಾಗಿ ಸರ್ಕಾರ ಕೂಡ ಗೊಂದಲದಲ್ಲಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಶಾಲೆ ತೆರೆದಾಗಿದ್ದು, ಶಾಲೆಗೆ ಹೋದ ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಇದೆಲ್ಲದನ್ನು ಯೋಚನೆ ಮಾಡಿ ಚರ್ಚೆ ನಡೆಸುತ್ತಿದೆ ಸರ್ಕಾರ. ಎಷ್ಟೇ ಮುಂಜಾಗೃತ ಕ್ರಮ ಕೈಗೊಂಡರೂ ಸೋಂಕು ಹರಡುತ್ತಿರುವಾಗ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಲು ಒಪ್ಪುತ್ತಾರಾ ಅನ್ನೋದೆ ಮುಂದಿರುವ ಪ್ರಶ್ನೆ.