ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರ ನಡುವೆಯೂ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಶಾಲಾ – ಕಾಲೇಜು, ಚಿತ್ರಮಂದಿರಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಚಟುವಟಿಕೆಗಳು ಆರಂಭವಾಗಿವೆ.
ಇದರ ಮಧ್ಯೆ ಕೇಂದ್ರ ಸರ್ಕಾರ ಸೆಪ್ಟೆಂಬರ್ 21ರಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಿದ್ದು, 9ರಿಂದ 12ನೇ ತರಗತಿವರೆಗಿನ ಮಕ್ಕಳು ಶಾಲೆಗೆ ಬಂದು ಪಠ್ಯದ ಕುರಿತು ಯಾವುದೇ ಗೊಂದಲವಿದ್ದರೆ ಶಿಕ್ಷಕರ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿತ್ತು.
ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವ ಯಾವುದೇ ಚಿಂತನೆ ಇಲ್ಲ. ಆದರೆ 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕುರಿತು ಅನುಮಾನವಿದ್ದರೆ ಶಿಕ್ಷಕರ ಬಳಿ ಚರ್ಚಿಸಬಹುದಾಗಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ ಬಳಿಕವೇ ಶಾಲೆ ಆರಂಭದ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.