ಕೇಂದ್ರ ಸರ್ಕಾರವು ಶಾಲೆಗಳನ್ನು ತೆರೆಯಲು ಆದೇಶ ಹೊರಡಿಸಿದೆ. ಇದರ ಪ್ರಕಾರ 15 ಅಕ್ಟೋಬರ್ ನಿಂದ ಶಾಲಾ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ. ಆದರೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಲೇ ಇದೆ. ಈ ಬೆನ್ನಲ್ಲೇ ಶಾಲಾ ಕಾಲೇಜು ತೆರೆದರೆ ಹೇಗೆ ಎಂಬ ಪ್ರಶ್ನೆ ಕೂಡ ರಾಜ್ಯ ಸರ್ಕಾರದ ಮುಂದಿದೆ.
ಈ ವಿಚಾರವಾಗಿ ಆರೋಗ್ಯ ಸಚಿವ ಶ್ರೀರಾಮುಲು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಒಂದೆಡೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ, ಮತ್ತೊಂದೆಡೆ ಶಾಲಾ – ಕಾಲೇಜು ತೆರೆಯಲು ಕೇಂದ್ರ ಸರ್ಕಾರ ಹೇಳಿದೆ. ಆದರೆ ಇದು ಮಕ್ಕಳ ಕುರಿತ ವಿಷಯ ಆಗಿರುವುದರಿಂದ ಇದು ತುಂಬಾ ಸೂಕ್ಷ್ಮ ವಿಷಯವಾಗಿದೆ. ಆದ್ದರಿಂದ ಎಲ್ಲಾ ಆಯಾಮಗಳಲ್ಲಿ ಸಮಾಲೋಚನೆ ಮಾಡಬೇಕಾಗಿದೆ. ಧನಾತ್ಮಕ ಮತ್ತು ಖುಣಾತ್ಮಕ ಅಂಶಗಳನ್ನ ಗಮನದಲ್ಲಿ ಇಟ್ಟುಕೊಂಡು ಚರ್ಚೆ ಮಾಡಬೇಕು. ತಜ್ಞರ ಜತೆ ಸಭೆ ಹಾಗೂ ವಿಸ್ತೃತ ಅಧ್ಯಯನದ ನಂತರ ನಮ್ಮ ಇಲಾಖೆ ಶಿಕ್ಷಣ ಇಲಾಖೆಗೆ ವಿಸ್ತೃತ ವರದಿ ಸಲ್ಲಿಸಲಿದೆ ಎಂದು ಹೇಳಿದರು.
ಅಲ್ಲದೆ ಮಕ್ಕಳ, ಪೋಷಕರ, ಶಿಕ್ಷಕರ ಸುರಕ್ಷತೆ, ಆರೋಗ್ಯ ನಮ್ಮ ಸರ್ಕಾರದ ಆದ್ಯತೆ. ಈ ವಿಷಯಗಳಲ್ಲಿ ಯಾವುದೇ ರಾಜಿ ಇಲ್ಲ. ಯಾವುದೇ ನಿರ್ಧಾರ ಕೈಗೊಂಡರು ಮಕ್ಕಳ ಸುರಕ್ಷತೆ, ಆರೋಗ್ಯದ ದೃಷ್ಟಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಮಕ್ಕಳ ಸುರಕ್ಷತೆ, ಆರೋಗ್ಯ ಮತ್ತು ಶಿಕ್ಷಣ ಎರಡನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಧಾರ ಮಾಡುತ್ತೇವೆ. ಇಲ್ಲಿ ಮಕ್ಕಳು ಹಾಗೂ ಪೋಷಕರು ಇಬ್ಬರನ್ನೂ ಕೌನ್ಸಿಲಿಂಗ್ ಮಾಡಬೇಕಿದೆ. ಇದಾದ ನಂತರವೇ ಮುಂದಿನ ನಿರ್ಧಾರ ಎಂದರು.