ಕೊರೊನಾ ಮಹಾಮಾರಿಯಿಂದಾಗಿ ಶಿಕ್ಷಣ ಕ್ಷೇತ್ರ ದೊಡ್ಡ ಸಮಸ್ಯೆ ಎದುರಿಸುತ್ತಿದೆ. ಮಾರ್ಚ್ ತಿಂಗಳಿನಿಂದ ಶಾಲಾ – ಕಾಲೇಜುಗಳು ಬಂದ್ ಆಗಿದ್ದು, ಈವರೆಗೂ ತೆರೆದಿಲ್ಲ. ಸೆಪ್ಟೆಂಬರ್ 1ರಿಂದ ಹಂತಹಂತವಾಗಿ ಶಾಲಾ – ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಬೇಕಿತ್ತಾದರೂ ಕೊರೊನಾ ಕಾರಣಕ್ಕೆ ಇದು ಸಾಧ್ಯವಾಗಿಲ್ಲ. ಈ ವೇಳೆಗೆ 10 ಲಕ್ಷ ವಿದ್ಯಾರ್ಥಿಗಳು ಶಾಲೆಗಳಲ್ಲಿ ದಾಖಲಾಗಬೇಕಿದ್ದು, ಆದರೆ ಈ ಗುರಿ ಸಾಧ್ಯವಾಗದ ಕಾರಣ ಇದೀಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ.
ಯಾವುದೇ ದಾಖಲೆಗಳನ್ನು ಅಪೇಕ್ಷಿಸದೆ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದು, ಆಗಸ್ಟ್ 10 ರಿಂದ 15 ರವರೆಗೆ ಮಕ್ಕಳ ಶಾಲಾ ದಾಖಲಾತಿ ಆಂದೋಲನದ ಮಾದರಿಯಲ್ಲಿ ನಡೆಯಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಯಾವ ದಿನವೇ ಆಗಲಿ ಶಾಲೆ ಸೇರಲು ಬರುವ ಮಕ್ಕಳನ್ನು ದಾಖಲಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.