ಬೆಂಗಳೂರು: ವೈಭವ್ ಜೈನ್ ಇಂಥವನು ಅಂತ ಗೊತ್ತಿದ್ದರೆ ಕಪಾಳಕ್ಕೆ ಹೊಡೆಯುತ್ತಿದ್ದೆ. ವೈಭವ್ ಜೈನ್ ಪರಿಚಯವಿದ್ದ ಕಾರಣಕ್ಕೆ ನನಗೆ ಸಿಸಿಬಿ ವಿಚಾರಣೆಗೆ ಕರೆದಿರಬಹುದು. ವಿಚಾರಣೆಗೆ ಎಲ್ಲಾ ರೀತಿ ಸಹಕಾರ ನೀಡುತ್ತೇನೆ ಎಂದು ನಟ ಆರ್ಯನ್ ಸಂತೋಷ್ ತಿಳಿಸಿದ್ದಾರೆ.
ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಸಿಸಿಬಿ ನೋಟಿಸ್ ಹಿನ್ನಲೆಯಲ್ಲಿ ಚಾಮರಾಜಪೇಟೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾದ ಸಂತೋಷ್ ಆರ್ಯನ್, ಸುದ್ದಿಗಾರರೊಂದಿಗೆ ಮಾತನಾಡಿ, ಯಲಹಂಕದಲ್ಲಿರುವ ನನ್ನ ಜೆ.ಡಿ. ಗಾರ್ಡನ್ ನ ವಿಲ್ಲಾವನ್ನು ವೈಭವ್ ಜೈನ್ ನೋಡಿಕೊಳ್ಳುತ್ತಿದ್ದ. ಕೆಲ ದಿನಗಳ ನಂತರ ಸ್ವಲ್ಪ ಗಲಾಟೆಯಾಯಿತು. ನಂತರ ನಿನ್ನ ಸಹವಾಸವೇ ನನಗೆ ಬೇಡ ಎಂದು ಹೇಳಿ ಆತನನ್ನು ಕಳುಹಿಸಿದ್ದೆ. ನಂತರ ನನಗೆ ಆತನ ಸಂಪರ್ಕವಿಲ್ಲ ಎಂದಿದ್ದಾರೆ.
ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗುವವರು ಐಷಾರಾಮಿ ಜೀವನ ನಡೆಸುವವರು, ಸಾಕಷ್ಟು ಹಣವಿರುವವರು ನಾವು ಅಂತಹ ಹಿನ್ನೆಲೆಯಿಂದ ಬಂದಿಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಕಷ್ಟಪಟ್ಟು ಮೇಲೆ ಬರಲು ಪ್ರಯತ್ನಿಸುತ್ತಿದ್ದೇವೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸಿಸಿಬಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ದ ಎಂದಿದ್ದಾರೆ ಸಂತೋಷ್.