ರಕ್ತ ಹೀನತೆಯಿಂದ ಬಳಲುವ ವ್ಯಕ್ತಿಗಳಿಗೆ ರಕ್ತ ನೀಡುವುದು ಅಥವಾ ರಕ್ತ ಹೆಚ್ಚಾಗಲು ಅನೇಕ ಔಷಧಿಗಳು, ಇಂಜಕ್ಷನ್‌ಗಳನ್ನು ನೀಡುವುದನ್ನು ನೋಡಿದ್ದೇವೆ. ಆದರೆ ಈ ರೀತಿ ರಕ್ತವನ್ನು ಹಸುವಿಗೆ ಹಾಕಿ ಅದರ ಪ್ರಾಣ ಉಳಿಸಿದ ಘಟನೆ ಕೇಳಿರುವುದು ಅಥವಾ ನೋಡಿರುವುದು ತೀರಾ ಅಪರೂಪ. ಇದೀಗ ಇಂತಹದ್ದೇ ಘಟನೆಯೊಂದು ಬಿಡದಿ ಹೋಬಳಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ಹೌದು, ಹೊಸೂರು ಗ್ರಾಮದ ಶಿವಲಿಂಗಯ್ಯ ಎಂಬುವವರ ಏಳು ತಿಂಗಳ ಗರ್ಭಿಣಿ ಹಸು ರಕ್ತ ಪಿಂಜರಿ ಎಂಬ ಕಾಯಿಲೆಯಿಂದ ಬಳಲುತ್ತಿತ್ತು. ಇದಕ್ಕೆ ರಕ್ತದ ಕೊರತೆ ಉಂಟಾಗಿದ್ದರಿಂದ ಹಸುವಿನಲ್ಲಿ ನಿಶ್ಯಕ್ತಿ ಉಂಟಾಗಿದೆ. ಹಸುವಿನ ಪರಿಸ್ಥಿತಿ ತೀರಾ ಚಿಂತಾಜನಕವಾಗಿತ್ತು. ಈ ವೇಳೆ ಹಿರಿಯ ಪಶು ವೈದ್ಯ ಡಾ.ಮಹದೇವ ಲಮಾಣಿ ಮತ್ತು ಡಾ.ಸಿ. ಸಚಿನ್ ಎಂಬ ವೈದ್ಯರು ಈ ಹಸುವಿಗೆ ಬೇರೊಂದು ಆರೋಗ್ಯವಂತ ಹಸುವಿನ ರಕ್ತವನ್ನು ಹಾಕಿದ್ದಾರೆ.
2 ಲೀಟರ್ ರಕ್ತವನ್ನು ಈ ಹಸುವಿಗೆ ಹಾಕಲಾಗಿದ್ದು ಸುಮಾರು 3 ಗಂಟೆಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ರಕ್ತ ಹಾಕಿದ ಬಳಿಕ ಈ ಗರ್ಭಿಣಿ ಹಸು ಚೇತರಿಸಿಕೊಂಡಿದೆ. ನಿಜಕ್ಕೂ ಇದೊಂದು ಸವಾಲೇ ಸರಿ. ಮನುಷ್ಯರಿಗಾದರೆ ಹೇಗೋ ರಕ್ತವನ್ನು ಹಾಕಬಹುದು. ಆದರೆ ಹಸುಗಳಿಗೆ ಜಾಗೃತಿಯಿಂದ ರಕ್ತ ನೀಡಬೇಕಾಗುತ್ತದೆ. ಈ ಕೆಲಸವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಈ ಪಶು ವೈದ್ಯರು.