ಬೆಂಗಳೂರು; ಸಿಸಿಬಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಅಂತರಾಷ್ಟ್ರೀಯ ಕುಖ್ಯಾತಿಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿಚಾರಣೆ ವೇಳೆ ಬಾಯ್ಬಿಟ್ಟ ವಿಷಯ ಕೇಳಿ ಅಧಿಕಾರಿಗಳೇ ದಂಗಾಗಿದ್ದಾರೆ.
ಒಮ್ಮೆ ಜೈಲಿಗೆ ಹೋಗಿ ಬಂದರೂ ಹ್ಯಾಕಿಂಗ್ ಮಾಡುವುದನ್ನು ನಿಲ್ಲಿಸದ ಶ್ರೀಕಿ, ತಾನು ಸ್ಥಳೀಯ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವುದಿಲ್ಲ. ವಿದೇಶಗಳ ಆನ್ ಲೈನ್ ಗೇಮ್ ಗಳನ್ನು ಮಾತ್ರ ಹ್ಯಾಕ್ ಮಾಡುವುದಾಗಿ ಹೇಳಿದ್ದಾನೆ. ಅಲ್ಲದೇ ತನಗೆ ಹ್ಯಾಕಿಂಗ್ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ ಎಂದಿದ್ದಾನೆ.
ಹ್ಯಾಕಿಂಗ್ ಮಾಡಲು ಏಕಾಗ್ರತೆ ಅವಶ್ಯವಾಗಿರುತ್ತದೆ. ಹಾಗಾಗಿ ಪ್ರತಿ ಗಂಟೆಗೆ ಒಮ್ಮೆ ಭಗವದ್ಗೀತೆ ಪಠಣ ಮಾಡುತ್ತೇನೆ, ಬಳಿಕ ಕೆಲ ಸಮಯ ಧ್ಯಾನ ಮಾಡುತ್ತೇನೆ. ಆಧ್ಯಾತ್ಮಿಕ ಚಿಂತಕರ ಜೀವನ ಚರಿತ್ರೆಗಳನ್ನೂ ಓದುತ್ತಿರುತ್ತೇನೆ. ಹೀಗೆ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಹೇಳಿದ್ದಾನೆ.