ಏಳು ವಿಧಾನ ಪರಿಷತ್ ಸ್ಥಾನಗಳಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರಗಳನ್ನ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಸಂಖ್ಯಾಬಲಕ್ಕೆ ಸಿಗೋ ನಾಲ್ಕು ಸ್ಥಾನಗಳಿಗೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಭ್ಯರ್ಥಿ ಆಯ್ಕೆಯಲ್ಲಿ ಸಿಎಂ ಯಡಿಯೂರಪ್ಪ ಮೇಲುಗೈ ಸಾಧಿಸಿದ್ರೂ, ಹೆಚ್. ವಿಶ್ವನಾಥ್ ಅವ್ರನ್ನ ಕೈಬಿಡಲಾಗಿದೆ. ಹಳ್ಳಿ ಹಕ್ಕಿಗೆ ಸ್ಥಾನ ಕೈ ತಪ್ಪಿದ್ದಕ್ಕಾಗಿ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು, ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್‌ಗೆ ವಿಧಾನ ಪರಿಷತ್ ಟಿಕೆಟ್ ಕೊಡಿಸೋದ್ರಲ್ಲಿ ಸಿಎಂ ಬಿಎಸ್‌ವೈ ಸಕ್ಸಸ್ ಆಗಿದ್ದಾರೆ. ಮಧ್ಯರಾತ್ರಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನ ಫೈನಲ್ ಮಾಡಿ ಪಟ್ಟಿ ಕಳಿಸಿದೆ. ಹೈಕಮಾಂಡ್ ನಾಯಕರು ಎಂಟಿಬಿ ನಾಗರಾಜ್, ಆರ್. ಶಂಕರ್‌ರನ್ನ ಎಂಎಲ್‌ಸಿ ಮಾಡೋದಕ್ಕೆ ಗ್ರೀನ್ ಸಿಗ್ನಲ್ ತೋರಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಸುನೀಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್ ಅವ್ರು ಅಚ್ಚರಿ ರೀತಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಕೊನೆಗಳಿಗೆಯಲ್ಲಾದ್ರೂ ಸಿಎಂ ಯಡಿಯೂರಪ್ಪ ಟಿಕೆಟ್ ಕೊಡಿಸ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿ ವಿಶ್ವನಾಥ್‌ಗೆ ಭಾರೀ ನಿರಾಸೆ ಉಂಟಾಗಿದೆ. ಹೈಕಮಾಂಡ್ ಕಳುಹಿಸಿಕೊಟ್ಟ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೇ ಇರೋದನ್ನ ನೋಡಿ ಶಾಕ್ ಆಗಿದ್ದಾರೆ. ಈ ಬಗ್ಗೆ ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಭೇಟಿಯಾಗಿ ಚರ್ಚಿಸಿದ್ದಾರೆ ವಿಶ್ವನಾಥ್. ಇನ್ನು ಎಂಟಿಬಿ ನಾಗರಾಜ್ ಸಿಎಂ ಭೇಟಿಯಾಗಿದ್ದಾರೆ. ನಂತರ ಟಿಕೆಟ್ ನೀಡಿದ್ದಕ್ಕಾಗಿ ಬಿಜೆಪಿಗೆ ಧನ್ಯವಾದ ಹೇಳಿದ್ದಾರೆ. ವಿಶ್ವನಾಥ್‌ಗೆ ಟಿಕೆಟ್ ಸಿಗದೇ ಇರುವುದಕ್ಕೆ ನನಗೂ ಬೇಸರವಾಗಿದೆ ಎಂದಿದ್ದಾರೆ.