ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಶಕ್ತಿ ಎಲ್ಲಿದೆ? ಬಿಜೆಪಿಗೆ ಬೆಂಬಲ ನೀಡಲು ಹೊರಟಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ ಕಟ್ಟಿ, ತಾವೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿ ಆಮೇಲೆ ಜೆಡಿಎಸ್ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ಮೊದಲು ಸ್ವತಂತ್ರ ಪಕ್ಷಕಟ್ಟಿಲಿ ನಂತರ ಜೆಡಿಎಸ್ ನಾಯಕತ್ವದ ಬಗ್ಗೆ ಮಾತಾಡಬೇಕು ಎಂದು ಸವಾಲು ಹಾಕುತ್ತಲೇ ಬಂದಿದ್ದೇನೆ. ಸವಾಲು ಸ್ವೀಕರಿಸಲಾಗದ ಸಿದ್ದರಾಮಯ್ಯ, ಜೆಡಿಎಸ್ ಅನ್ನು ಟೀಕಿಸುವುದರಲ್ಲೇ ತಮ್ಮ ಶಕ್ತಿಯ ಪರೀಕ್ಷೆ ಮಾಡಿಕೊಳ್ಳುತ್ತಿರುವಂತಿದೆ ಎಂದಿದ್ದಾರೆ.
ಬಿಜೆಪಿ ಶಾಸಕ ಯತ್ನಾಳ್ ಗೆ ಶಾಕ್ ನೀಡಿದ ಹೈಕಮಾಂಡ್
ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ. ಆದರೆ, ಬೇರೆ ಪಕ್ಷಗಳಿಗೆ ಬೆಂಬಲ ನೀಡುತ್ತೇವೆ ಎಂದೇನಾದರೂ ಹೇಳಿದ್ದಾರಾ? ಉಪಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ ಇತಿಹಾಸ ಇರುವುದು ಜೆಡಿಎಸ್ ಗಲ್ಲ, ತಮಗೆ? 2008ರಲ್ಲಿ ನಡೆದ ಆಪರೇಷನ್ ಕಮಲದ ಉಪಚುನಾವಣೆಗಳಲ್ಲಿ ನೀವು ಮಾಡಿದ ಕುತಂತ್ರಗಳನ್ನು ನೆನಪಿಸಲೇ ಎಂದು ಪ್ರಶ್ನಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಜೆಡಿಸ್ ಗೆ ಇರುವ ಶಕ್ತಿ ಮತ್ತು ಸಾಮರ್ಥ್ಯ ಪ್ರದರ್ಶನಕ್ಕೆ ಇನ್ನೂ ಸಮಯವಿದೆ. ವೇದಿಕೆಯೂ ಸಿಗಲಿದೆ. ಆಗ ಸಿದ್ದರಾಮಯ್ಯನವರು ನಮ್ಮ ಜೊತೆ ಚರ್ಚೆಗೆ, ಸೆಣಸಾಟಕ್ಕೆ ಬರಲಿ. ಒಂದುವೇಳೆ ಅವರೇ ಒಂದು ಪಕ್ಷವನ್ನೇನಾದರೂ ಕಟ್ಟಿದರೆ ಅದಕ್ಕೂ ಜೆಡಿಎಸ್ ನ ಸಾಮರ್ಥ್ಯ ತೋರಿಸುವ ಕೆಲಸ ಮಾಡೋಣವಂತೆ. ಅಲ್ಲಿಯವರೆಗೆ ಅವರು ಸುಮ್ಮನಿರಲಿ. ಜೆಡಿಎಸ್ ನಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿ, ಹೊರಬಿದ್ದ ಮೇಲೆ ಸಿದ್ದರಾಮಯ್ಯನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಜೆಡಿಎಸ್ ಗೆ ಶಕ್ತಿ ಎಲ್ಲಿದೆ ಎಂಬ ಅವರ ಹೇಳಿಕೆಗಳು, ಜೆಡಿಎಸ್ ಗೆ ಅವರು ಬಗೆದ ದ್ರೋಹದ ಪ್ರತೀಕ. ನಮ್ಮ ಬಗ್ಗೆ ಮಾತಾಡುವ ಅಧಿಕಾರ ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.