ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆಯುತ್ತಿರುವ ವಿಶೇಷ ಪರಿಷತ್ ಕಲಾಪ ಇದೀಗ ಕೋಲಾಹಲಕ್ಕೆ ಕಾರಣವಾಗಿದೆ. ಸದನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ-ತಳ್ಳಾಟ ಆರಂಭವಾಗಿದೆ.
ಸಭಾಪತಿ ಕುರ್ಚಿಯಲ್ಲಿ ಉಪಸಭಾಪತಿ ಧರ್ಮೇಗೌಡ ಕುಳಿತಿರುವುದಕ್ಕೇ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಉಪಸಭಾಪತಿಯವರನ್ನು ಕುರ್ಚಿ ಯಿಂದ ಎಳೆದೊಯ್ದಿದ್ದಾರೆ. ಈ ವೇಳೆ ಬಿಜೆಪಿ ಸದಸ್ಯರು ತಪ್ಪಿಸಲು ಮುಂದಾದಾಗ ಎರಡು ಪಕ್ಷಗಳ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದಿದೆ.
ಸದನದ ಒಳಗೇ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ತಳ್ಳಾಟದ ವೇಳೆ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಕೆಳಕ್ಕೆ ಬಿದ್ದ ಘಟನೆಯೂ ನಡೆದಿದೆ. ಒಟ್ಟಾರೆ ವಿಧಾನ ಪರಿಷತ್ ಕಲಾಪ ಇಂದು ರಣರಂಗವಾಗಿದೆ.