ಇತ್ತ ಕೊರೊನಾ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಇದರ ನಡುವೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜ್ಯಸಭಾ ಚುನಾವಣೆಯ ನಾಮಿನೇಷನ್ ಪ್ರಕ್ರಿಯೆ ಇಂದಷ್ಟೆ ಮುಗಿದಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಿಸಿದೆ.
ನಜೀರ್ ಅಹಮದ್, ಜಯಮ್ಮ, ಎಂ.ಸಿ. ವೇಣುಗೋಪಾಲ್, ಎನ್.ಎಸ್. ಬೋಸರಾಜು, ಎಚ್.ಎಂ. ರೇವಣ್ಣ, ಟಿ.ಎ.ಶರವಣ, ಡಿ.ಯು. ಮಲ್ಲಿಕಾರ್ಜುನ ಸೇರಿ ಒಟ್ಟು 7 ಮಂದಿಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಪರಿಷತ್‌ನ ಈ ಏಳು ಸ್ಥಾನಗಳ ಅವಧಿ ಜೂನ್ 30ಕ್ಕೆ ಅಂತ್ಯವಾಗಲಿದ್ದು, ಈ ಸ್ಥಾನಗಳನ್ನು ಭರ್ತಿ ಮಾಡಲು ಆಯೋಗ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಇದೇ ಜೂನ್ 26 ರಂದು ಚುನಾವಣೆ ನಡೆಯಲಿದೆ. ಆದರೆ ಪದವೀಧರರ ಕ್ಷೇತ್ರದ ಹಾಗೂ ಶಿಕ್ಷಕರ ಕ್ಷೇತ್ರದ ತಲಾ 2 ಸ್ಥಾನಗಳಿಗೆ ನಡೆಯಬೇಕಾಗಿದ್ದ ಚುನಾವಣೆಯನ್ನು ಆಯೋಗ ಮುಂದೂಡಿದೆ.
ಜೂನ್ 18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 19 ರಂದು ನಾಮಪತ್ರಗಳ ಪರಿಶೀಲನೆ ಮತ್ತು ಜೂನ್ 22 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಜೂನ್ 29 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು ಅಂದೇ ಸಂಜೆ 5 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ.