ಬೆಂಗಳೂರು: ಕೊರೊನಾ ಭೀತಿ ನಡುವೆಯೇ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಈ ನಡುವೆ ವಿಧಾನಸೌಧದಲ್ಲೇ ಸಚಿವರು ಹಾಗೂ ಶಾಸಕರು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಗಲಾಟೆ ನಡೆಸಿರುವ ಘಟನೆ ನಡೆದಿದೆ.
ವಿಧಾನಸೌಧದ ಕ್ಯಾಂಟೀನ್ ನಲ್ಲಿ ಸಚಿವ ನಾರಾಯಣಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನಡುವೆ ಭಾರಿ ಗಲಾಟೆ ನಡೆದಿದ್ದು ಹೊಡೆದಾಟದ ಹಂತಕ್ಕೂ ಹೋಗಿದೆ. ವರ್ಗಾವಣೆ ಫೈಲ್ ಸಂಬಂಧ ಈ ಗಲಾಟೆ ನಡೆದಿದೆ ಎನ್ನಲಾಗಿದೆ.
ಶಾಸಕ ಬೆಳ್ಳಿ ಪ್ರಕಾಶ್ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ತೋಟಗಾರಿಕೆ ಇಲಾಖೆ ಅನುದಾನದ ಬಗ್ಗೆ ಫೈಲ್ ಗೆ ಸಿಎಂ ಅವರಿಂದ ಸಹಿ ಹಾಕಿಸಿಕೊಡುವಂತೆ ಸಚಿವರಿಗೆ ಹೇಳಿದ್ದರು. ಆದರೆ ಸಚಿವ ನಾರಾಯಣಗೌಡ ಶಾಸಕರ ಮೊಬೈಲ್ ಕರೆಯನ್ನೂ ಸ್ವೀಕರಿಸದೇ ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ. ಇಂದು ಅಧಿವೇಶನ ಹಿನ್ನಲೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಸಚಿವ ನಾರಾಯಣಗೌಡ ಹಾಗೂ ಶಾಸಕ ಬೆಳ್ಳಿ ಪ್ರಕಾಶ್ ಕ್ಯಾಂಟೀನ್ ನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಶಾಸಕರು ಪ್ರಶ್ನಿಸಿದಾಗ ಕಚೇರಿಗೆ ಬಂದು ಮಾತನಾಡಲು ಸಚಿವರು ತಿಳಿಸಿದ್ದಾರೆ.
ಈ ವೇಳೆ ಸಿಟ್ಟಿಗೆದ್ದ ಶಾಸಕ ಬೆಳ್ಳಿ ಪ್ರಕಾಶ್, ಬೇರೆ ರಾಜ್ಯಗಳಲ್ಲಿ ಶಾಸಕರು ಹೇಳಿದ ಕೆಲಸಗಳನ್ನು ತಕ್ಷಣ ಮಾಡಿಕೊಡಲಾಗುತ್ತೆ. ಆದರೆ ಇಲ್ಲಿ ಹಾಗಲ್ಲ. ನಾವು ನಾಲಾಯಕ್ ಶಾಸಕರಿರಬೇಕು. ಹೀಗಾಗಿ ನಮ್ಮ ಕೆಲಸವಾಗುತ್ತಿಲ್ಲ. ಒಂದು ವಾರದಲ್ಲಿ ಕೆಲಸ ಆಗುತ್ತೆ ಎಂದು ಸಚಿವರು ನಾಲ್ಕೈದು ವಾರ ಅಲೆದಾಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಾಲಾಯಕ್ ಎಂದು ತನಗೇ ಹೇಳಿರಬೇಕೆಂದು ತಪ್ಪು ತಿಳಿದ ಸಚಿವ ನಾರಾಯಣಗೌಡ ಶಾಸಕರ ವಿರುದ್ಧ ಕೊಪೋದ್ರಿಕ್ತರಾಗಿದ್ದಾರೆ. ಇಬ್ಬರ ನಡುವೆ ಗಲಾಟೆಯಾಗಿದ್ದು, ಒಂದು ಹಂತದಲ್ಲಿ ಜಗಳ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೂ ಹೋಗಿದೆ ಎಂದು ತಿಳಿದುಬಂದಿದೆ.