ವಿದ್ಯೆ ಕಲಿಸಿದ ಗುರುವಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ. ಇತ್ತೀಚೆಗಷ್ಟೇ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಗಾಗಿ ಮನೆಯೊಂದನ್ನು ನಿರ್ಮಿಸಿಕೊಡುವ ಮೂಲಕ ಗುರುದಕ್ಷಿಣೆ ನೀಡಿದ್ದ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೀಗ ಸಚಿವ ಆನಂದ್ ಸಿಂಗ್ ತಮ್ಮ ಶಿಕ್ಷಕಿ ಹೇಳಿದ ಮಾತು ನಡೆಸಿಕೊಡುವ ಮೂಲಕ ಮಾದರಿಯಾಗಿದ್ದಾರೆ.
ಸಚಿವ ಆನಂದ್ ಸಿಂಗ್ ಬಳ್ಳಾರಿಯ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾಗ ಫಾತಿಮಾ ಎಂಬ ಶಿಕ್ಷಕಿ ಅವರಿಗೆ ಮಾರ್ಗದರ್ಶನ ಮಾಡಿದ್ದರು. ಈಗಲೂ ಸಹ ತಮ್ಮ ನೆಚ್ಚಿನ ಶಿಕ್ಷಕಿಯನ್ನು ಆಗಾಗ ಭೇಟಿ ಮಾಡಿ ಕುಶಲೋಪರಿ ವಿಚಾರಿಸುತ್ತಿದ್ದರು.
ಗುರುವಾರದಂದು ಆನಂದ್ ಸಿಂಗ್ ತಮ್ಮ ಶಿಕ್ಷಕಿ ಫಾತಿಮಾ ಅವರನ್ನು ಭೇಟಿ ಮಾಡಿದ ವೇಳೆ ತಮಗಾಗಿ ಏನನ್ನೂ ಕೇಳದ ಫಾತಿಮಾ, ಸಂಕಷ್ಟದಲ್ಲಿದ್ದ ತಮ್ಮ ಶಿಷ್ಯೆ ರಜನಿ ಎಂಬವರಿಗೆ ಮನೆ ನಿರ್ಮಿಸಿಕೊಳ್ಳಲು ನೆರವಾಗುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ತಕ್ಷಣವೇ ಸ್ಪಂದಿಸಿದ ಆನಂದ್ ಸಿಂಗ್ 6 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.