ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಹೀಗಾಗಿ ಅನಿವಾರ್ಯವಾದ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರ ಬನ್ನಿ. ಹಾಗೂ ಈ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದಲ್ಲದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಇಂತಹ ಸಂದರ್ಭದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಕಾಲೇಜು ಪ್ರವೇಶಾತಿ ಕುರಿತಂತೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರಸ್ತುತ ಕಾಲೇಜುಗಳಿಗೆ ಪ್ರವೇಶಾತಿ ನಡೆಯುತ್ತಿರುವ ಕಾರಣ ವಿದ್ಯಾರ್ಥಿಗಳು ಪದೇ ಪದೇ ಕಾಲೇಜುಗಳಿಗೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಆನ್ ಲೈನ್ ನಲ್ಲಿ ಅವಕಾಶ ಕಲ್ಪಿಸಲಾಗುತ್ತಿರುವುದರ ಜೊತೆಗೆ ಮೊಬೈಲಿನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ರಾಜ್ಯದ 430 ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ಈ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ದಾಖಲಾತಿ ಕುರಿತಂತೆ ವಿದ್ಯಾರ್ಥಿಗಳ ಮೊಬೈಲ್ ಗೆ ಎಸ್ಎಂಎಸ್ ಕಳುಹಿಸಲಾಗುತ್ತದೆ.
ವಿದ್ಯಾರ್ಥಿಗಳು ಪ್ರವೇಶಾತಿಗಾಗಿ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ ದ್ವಿತೀಯ ಪಿಯುಸಿ ದೃಡೀಕೃತ ಅಂಕಪಟ್ಟಿಯನ್ನು ಸ್ಕ್ಯಾನ್ ಮಾಡಿ ಅರ್ಜಿ ಜೊತೆಗೆ ಅಪ್ಲೋಡ್ ಮಾಡಬೇಕಾಗುತ್ತದೆ. ಅಲ್ಲದೆ ತಾವು ಇಚ್ಚಿಸುವ 10 ಕಾಲೇಜು – ಕೋರ್ಸ್ / ಕಾಂಬಿನೇಶನ್ ಗಳನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಳ್ಳಬೇಕಾಗಿದ್ದು, ಆಯ್ಕೆಯಾದ ಬಳಿಕ ಕಾಲೇಜಿಗೆ ಪ್ರವೇಶ ಪಡೆಯಲು ಎರಡು ಭಾವಚಿತ್ರ, ಹತ್ತನೇ ತರಗತಿ ಹಾಗೂ ಪಿಯುಸಿ ಮೂಲ ಅಂಕಪಟ್ಟಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಲು ಸೂಚಿಸಲಾಗಿದೆ.