ದೇಶದಾದ್ಯಂತ ಕೊರೊನಾ ಅಬ್ಬರಿಸುತ್ತಿರುವ ಪರಿಣಾಮ ಮಾರ್ಚ್ ತಿಂಗಳಿನಿಂದಲೂ ಶಾಲಾ – ಕಾಲೇಜುಗಳು ಬಂದ್ ಆಗಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಳಾಗಬಾರದೆಂಬ ಕಾರಣಕ್ಕೆ ಇದರ ಮಧ್ಯೆಯೂ ಪ್ರಮುಖ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಹೀಗಾಗಿ ಎಂಜಿನಿಯರಿಂಗ್ ಪ್ರವೇಶಕ್ಕೆ ನಡೆಯುವ ಜೆಇಇ ಹಾಗೂ ಮೆಡಿಕಲ್ ಪ್ರವೇಶಾತಿಗಾಗಿ ನಡೆಯುವ ನೀಟ್ ಪರೀಕ್ಷೆಗಳಿಗೆ ದಿನಾಂಕ ನಿಗದಿಪಡಿಸಲಾಗಿದೆ. ಇದರ ಮಧ್ಯೆ ಕೆಲವರು ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತ್ತು.
ಈಗ ಪರೀಕ್ಷೆ ಕುರಿತಂತೆ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದು ನಿಗದಿಯಂತೆ ಜೆಇಇ ಹಾಗೂ ನೀಟ್ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದೆ. ಸೆಪ್ಟಂಬರ್ 1ರಿಂದ 6 ರವರೆಗೆ ಜೆಇಇ ಪರೀಕ್ಷೆ ನಡೆಯಲಿದ್ದು, ಸೆಪ್ಟೆಂಬರ್ 13ರಂದು ನೀಟ್ ಪರೀಕ್ಷೆ ನಡೆಯಲಿದೆ ಎಂದು ತಿಳಿಸಲಾಗಿದೆ.