ವಿದ್ಯಾಗಮ ಶಿಕ್ಷಣ ವ್ಯವಸ್ಥೆ ಇದೀಗ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸೋಂಕು ಹರಡುವ ತಾಣವಾಗಿ ಮಾರ್ಪಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗಾಗಲೇ ಜಿಲ್ಲೆಯ ನಾನಾ ಭಾಗಗಳಲ್ಲಿ ವಿದ್ಯಾಗಮ ನಡೆಸಿದ ನಂತರ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೋಂಕು ಹರಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ವಿದ್ಯಾಗಮ ನಿಲ್ಲಿಸಿ ಎಂಬ ಕೂಗು ಹೆಚ್ಚಾಗಿದೆ.
ಒಂದು ಕಡೆ ಶಾಲೆ ತೆರೆದರೆ ಮಕ್ಕಳಿಗೆ ಸೋಂಕು ಹರಡುತ್ತದೆ ಎಂಬ ನಿಟ್ಟಿನಲ್ಲಿ ಶಾಲೆ ತೆರೆದಿಲ್ಲ. ಆದರೆ ಮಕ್ಕಳು ಕಲಿಕೆಯಿಂದ ದೂರ ಉಳಿಯಬಾರದು, ಶಿಕ್ಷಣ ಬೇಕು ಎಂಬ ಕಾರಣಕ್ಕೆ ವಿದ್ಯಾಗಮ ಮೂಲಕ ಶಿಕ್ಷಣ ನೀಡಲಾಗುತ್ತದೆ. ಆದರೆ ಇದೀಗ ಈ ವಿದ್ಯಾಗಮ ಕಾರ್ಯಕ್ರಮದಿಂದಲೇ ಸೋಂಕು ಹರಡುತ್ತಿದೆ ಎಂಬ ಆರೋಪ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಮುಖಂಡರೂ ಕೂಡ ವಿದ್ಯಾಗಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಶಾಲೆ ಪ್ರಾರಂಭ ಮಾಡೋದು ಬೇಡ. ಪೋಷಕರು ಶಾಲೆ ಪ್ರಾರಂಭ ಬೇಡ ಅಂತಿದ್ದಾರೆ. ಸರ್ಕಾರ ವಿದ್ಯಾಗಮ ಕಾರ್ಯಕ್ರಮ ತಂದಿದೆ. ಇದ್ರಿಂದ 26 ಕ್ಕೂ ಅಧಿಕ ಶಿಕ್ಷಕರು ಮರಣ ಹೊಂದಿದ್ದಾರೆ. ಪೋಷಕರ ಮೂಲಕ ಸರ್ಕಾರಕ್ಕೆ ಒತ್ತಾಯ ಹಾಕುತ್ತಿದ್ದೇನೆ. ಪೋಷಕರು ಮತ್ತು ಮಕ್ಕಳ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಬಾರದು. ಸಿಎಂ ಅವ್ರಿಗೂ ಕರೆ ಮಾಡಿ ಈ ಬಗ್ಗೆ ಒತ್ತಾಯ ಮಾಡ್ತೀನಿ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.
ಇಷ್ಟೆಲ್ಲಾ ಒತ್ತಾಯದ ನಡುವೆಯೂ ಈ ವಿದ್ಯಾಗಮ ಕಾರ್ಯಕ್ರಮ ಸರಿಯಾದ ಹಾದಿಯಲ್ಲಿದೆ ಸುರಕ್ಷಿತವಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಈ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಅವರು, ವಿಶೇಷವಾಗಿ ಸಾಮಾಜಿಕ, ಆರ್ಥಿಕವಾಗಿ ದುರ್ಬಲರಾದ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸುತ್ತಿರುವ ವಿದ್ಯಾಗಮ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಬಹುಪಾಲು ನಮ್ಮ ಸರ್ಕಾರಿ ಶಾಲೆಗಳಿಗೆ ಸೇರಿದ 47 ಲಕ್ಷ ಮಕ್ಕಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ. ಎಲ್ಲಿಯೂ ಕಾರ್ಯಕ್ರಮದ ಕಾರಣದಿಂದಲೇ ಸೋಂಕು ಹರಡಿದೆಯೆನ್ನುವುದು ಅಧಿಕೃತವಾಗಿ ದೃಢಪಟ್ಟಿಲ್ಲ.
ಅತ್ಯಂತ ವೈಜ್ಞಾನಿಕವಾಗಿ ರೂಪಿತವಾಗಿರುವ ಈ ಕಾರ್ಯಕ್ರಮ ನಮ್ಮ ಸಮಾಜದ ದುರ್ಬಲ ಮಕ್ಕಳ ಕಲಿಕೆಯನ್ನು ಮುಂದುವರೆಸಲು, ಶಿಕ್ಷಕ ಹಾಗು ವಿದ್ಯಾರ್ಥಿಗಳ ನಡುವಿನ ಸ್ನೇಹ ಸಂಬಂಧ ಗಟ್ಟಿಗೊಳ್ಳುವ ಮೂಲಕ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಅಷ್ಟೇ ಅಲ್ಲ, ಅವರ ಮಾನಸಿಕ, ದೈಹಿಕ ಸ್ಥಿತಿಗತಿಗಳನ್ನು ಸುಸ್ಥಿತಿಯಲ್ಲಿಡಲು ಅದು ಪೂರಕವಾಗಿದೆ. ಇಡೀ ದೇಶದಲ್ಲಿಯೇ ವಿದ್ಯಾಗಮ ಮಾದರಿಯ ಉಪಕ್ರಮವಾಗಿ ಗುರುತಿಸಿಕೊಂಡಿದೆ. ಶಿಕ್ಷಕರ ಕಾರಣಕ್ಕೇ ಮಕ್ಕಳು ಕೋವಿಡ್ ಸೋಂಕಿತರಾಗಿದ್ದಾರೆಯೇ, ಮಕ್ಕಳಿಂದ ಶಿಕ್ಷಕರಿಗೆ ಅದು ಹರಡಿದೆಯೇ ಎಂಬ ಬಗ್ಗೆ ರಾಜ್ಯಾದ್ಯಂತ ಮಾಹಿತಿ ಸಂಗ್ರಹಣೆಗೆ ಇಂದಿನಿಂದಲೇ ನಾವು ಮುಂದಾಗಿದ್ದೇವೆ. ಪ್ರತಿ ಜಿಲ್ಲೆಯಿಂದ, ಸಂಬಂಧಪಟ್ಟವರಿಂದ ಈ ಸಂಪೂರ್ಣ ಮಾಹಿತಿ ಈ ಕೂಡಲೇ ಸಂಗ್ರಹಿಸಲಾಗುವುದು. ಸಂಪೂರ್ಣ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.