ಮಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಮೂಡಬಿದರೆಯ ಶಿಕ್ಷಕಿ ಪದ್ಮಾಕ್ಷಿ ಎಂಬುವವರು ಸೋಂಕಿಗೆ ಬಲಿಯಾಗಿದ್ದಾರೆ. ಇವರಿಗೆ ವಿದ್ಯಾಗಮ ಯೋಜನೆಯಡಿಯಲ್ಲಿ ಪಾಠ ಮಾಡಲು ಹೋದಾಗ ಸೋಂಕು ತಗುಲಿತ್ತು ಎನ್ನಲಾಗಿದೆ.
ಇದೀಗ ಶಿಕ್ಷಕಿ ಪದ್ಮಾಕ್ಷಿ ಚಿಕಿತ್ಸೆ ಫಲಕಾರಿಯಾಗದೇ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದು, ಮೂಡಬಿದರೆಯ ಶಿಕ್ಷಕಿ ಪದ್ಮಾಕ್ಷಿ ಕೊರೊನಾದಿಂದ ಸಾವನ್ನಪ್ಪಿರುವುದು ನೋವು ತಂದಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಪದ್ಮಾಕ್ಷಿ ಹಾಗೂ ಆಕೆಯ ಪತಿ ಇಬ್ಬರೂ ಶಿಕ್ಷಕರಾಗಿದ್ದು, ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಹೋಗಿದ್ದಾಗ ಇಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು ಎನ್ನಲಾಗಿತ್ತು. ತಂದೆ-ತಾಯಿ ಇಬ್ಬರಿಗೂ ಕೊರೂನಾ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿಕಿತ್ಸೆ ವೆಚ್ಚ ಭರಿಸಲು ಸಹಾಯ ಮಾಡುವಂತೆ ಶಿಕ್ಷಕಿಯ ಪುತ್ರಿ ಸರ್ಕಾರಕ್ಕೆ ಮನವಿ ಮಾಡಿದ್ದಳು. ಅದರಂತೆ ಶಿಕ್ಷಕಿ ಪದ್ಮಾಕ್ಷಿ ಹಾಗೂ ಅವರ ಪತಿಯ ಚಿಕಿತ್ಸೆಗೆ ಸರ್ಕಾರ ನೆರವು ನೀಡಿತ್ತು. ಆದರೀಗ ಶಿಕ್ಷಕಿ ಪದ್ಮಾಕ್ಷಿ ಕೊನೆಗೂ ಚೇತರಿಸಿಕೊಳ್ಳದೇ ಕೊನೆಯುಸಿರೆಳೆದಿದ್ದಾರೆ.