ಬಳ್ಳಾರಿ ಜನತೆಯ ವಿರೋಧದ ನಡುವೆಯೂ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆಯನ್ನು ಮಂಗಳವಾರದಂದು ಅಧಿಕೃತವಾಗಿ ಘೋಷಿಸಲಾಗಿದೆ. ಈ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ಕಾರ ರಚನೆ ಸಂದರ್ಭದಲ್ಲಿ ಆನಂದ್ ಸಿಂಗ್ ಅವರಿಗೆ ನೀಡಿದ್ದ ಮಾತನ್ನು ನೆರವೇರಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ಈಗ ಮತ್ತಷ್ಟು ಹೊಸ ಜಿಲ್ಲೆಗಳ ರಚನೆಗೆ ಬೇಡಿಕೆ ಹೆಚ್ಚಾಗುತ್ತಿದೆ.
ಬೆಳಗಾವಿಯನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಯನ್ನು ರಚನೆ ಮಾಡಬೇಕೆಂಬ ಒತ್ತಾಯ ಮೊದಲಿನಿಂದಲೂ ಇದ್ದು, ಈಗ ವಿಜಯನಗರ ಜಿಲ್ಲೆ ಘೋಷಣೆ ಬಳಿಕ ಈ ಬೇಡಿಕೆ ಮತ್ತಷ್ಟು ಬಲ ಪಡೆದುಕೊಂಡಿದೆ. ಇದರ ಜೊತೆಗೆ ರಾಯಚೂರು ಜಿಲ್ಲೆಯನ್ನು ವಿಭಜಿಸಿ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಕೇಳಿಬರುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯನ್ನು ಇಬ್ಬಾಗ ಮಾಡಿ ಪ್ರತ್ಯೇಕ ಶಿರಸಿ ಜಿಲ್ಲೆ ಮಾಡಬೇಕೆಂಬ ಮನವಿಯೂ ಜೋರಾಗತೊಡಗಿದೆ.
ಸಚಿವ ಆನಂದ್ ಸಿಂಗ್ ವಿರುದ್ಧ ಕಿಡಿಕಾರಿದ ಶಾಸಕ ಸೋಮಶೇಖರ್ ರೆಡ್ಡಿ
ಇದಲ್ಲದೆ ಬಾಗಲಕೋಟೆಯನ್ನು ವಿಭಜಿಸಿ ಜಮಖಂಡಿಯನ್ನು ಜಿಲ್ಲೆಯನ್ನಾಗಿ ಮಾಡಲು ಒಂದು ವರ್ಗ ಒತ್ತಾಯಿಸುತ್ತಿದ್ದರೆ ಮತ್ತೊಂದು ವರ್ಗ ಇಂಡಿಯನ್ನು ಜಿಲ್ಲೆಯನ್ನಾಗಿ ಮಾಡಿ ಎಂಬ ಬೇಡಿಕೆ ಇಡುತ್ತಿದೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಭಜಿಸಿ ಪುತ್ತೂರು ಜಿಲ್ಲೆಯನ್ನಾಗಿ ಮಾಡಲು ಸಹ ಮನವಿ ಕೇಳಿಬರುತ್ತಿದೆ. ಒಟ್ಟಾರೆ ವಿಜಯನಗರ ಜಿಲ್ಲೆ ಘೋಷಣೆ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತ್ಯೇಕ ಜಿಲ್ಲೆ ಮಾಡುವ ಕುರಿತು ಬೇಡಿಕೆ ಹೆಚ್ಚಾಗತೊಡಗಿದೆ.