ಸೆಪ್ಟೆಂಬರ್ 17ರಂದು ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಕೊರೊನಾ ಕಾರಣಕ್ಕೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಸೆಪ್ಟಂಬರ್ 23 ರ ಬುಧವಾರದಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಇದೇ ಮಾರಕ ಸೋಂಕಿಗೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಇದರಿಂದಾಗಿ ಕೇವಲ ಒಂದು ವಾರದ ಅವಧಿಯಲ್ಲಿ ರಾಜ್ಯ ಬಿಜೆಪಿಗೆ ಎರಡು ದೊಡ್ಡ ಆಘಾತ ಎದುರಾದಂತಾಗಿದ್ದು, ಕೊರೊನಾ ಎಂಬ ಮಹಾಮಾರಿಗೆ ಓರ್ವ ರಾಜ್ಯಸಭಾ ಸದಸ್ಯ ಹಾಗೂ ಓರ್ವ ಲೋಕಸಭಾ ಸದಸ್ಯರನ್ನು ಕಳೆದುಕೊಂಡಂತಾಗಿದೆ.
ಅಶೋಕ್ ಗಸ್ತಿ ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಸುರೇಶ್ ಅಂಗಡಿ ಸತತ ನಾಲ್ಕು ಅವಧಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಇಬ್ಬರ ಅಕಾಲಿಕ ಸಾವು ಬಿಜೆಪಿಯನ್ನು ಮಾತ್ರವಲ್ಲದೆ ರಾಜ್ಯದ ಜನತೆಗೂ ಆಘಾತ ತಂದಿದೆ.