ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ವಿಚಾರವಾಗಿ ಹಲವು ಸಚಿವರ ಅಸಮಾಧಾನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಲಸಿಗರಿಗೆ ನಾನು ಈ ಹಿಂದೆಯೇ ಹೇಳಿದ್ದೆ ರಾಜಕೀಯ ಸಮಾಧಿಯಾಗುತ್ತೀರಾ ಅಂತ ಈಗ ಏನಾಗಿದೆ ನೋಡಿ ಎಂದು ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ವಲಸಿಗ ಸಚಿವರಿಗೆ ಯಾವುದೋ ಡಮ್ಮಿ ಖಾತೆಗಳನ್ನು ಕೊಟ್ಟಿದ್ದಾರೆ. ಈ ಮೂಲಕ ಅವರನ್ನು ಯೂಸ್ ಆಂಡ್ ಥ್ರೋ ಮಾಡಿದ್ದಾರೆ. ನಾನು ಈ ಹಿಂದೆಯೇ ಹೇಳಿದ್ದೆ. ಎಂಟಿಬಿ ನಾಗರಾಜ್, ನಾರಾಯಣ ಗೌಡ, ಗೋಪಾಲಯ್ಯ ಕಥೆ ನೋಡಿ ಹೇಗಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಐಸಿಯು, ವೆಂಟಿಲೇಟರ್ ನಲ್ಲಿದೆ. ಬಿಜೆಪಿ ನಾಯಕರಲ್ಲಿಯೇ ಅಸಮಾಧಾನ ಭುಗಿಲೆದ್ದಿದೆ. ಇನ್ನು ರಾಜ್ಯದ ಅಭಿವೃದ್ಧಿ ಸರ್ಕಾರಕ್ಕೆ ಬೇಕಿಲ್ಲ, ಎಲ್ಲರೂ ಕುರ್ಚಿಗಾಗಿ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.