ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂಬುದು ಈವರೆಗೆ ಪ್ರಹಸನದಂತಾಗಿದೆ. ಪ್ರತಿ ಬಾರಿಯೂ ವರ್ಗಾವಣೆ ಒಂದಲ್ಲಾ ಒಂದು ಕಾರಣಕ್ಕೆ ಮುಂದೂಡಿಕೆಯಾಗುತ್ತಲೇ ಬರುತ್ತಿದ್ದು, ಈ ಬಾರಿಯಾದರೂ ಅದು ನಿಗದಿತ ಸಮಯದಲ್ಲಿ ನೆರವೇರಲಿದೆಯೇ ಎಂಬ ಪ್ರಶ್ನೆ ಶಿಕ್ಷಕ ಸಮುದಾಯದಲ್ಲಿ ಮೂಡಿತ್ತು.
ನವೆಂಬರ್ 5ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸುವ ಕುರಿತು ವೇಳಾ ಪಟ್ಟಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದರಾದರೂ ಸಹ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ವಿಳಂಬವಾಗಬಹುದು ಎಂದು ಹೇಳಲಾಗಿತ್ತು.
ಆದರೆ ಇದೀಗ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನವಂಬರ್ 5 ರಿಂದ ಆರಂಭವಾಗಲಿದೆ ಎಂದು ಘೋಷಿಸಿರುವ ಕಾರಣ ಇದು ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನವೆಂಬರ್ 5ರಂದು ವರ್ಗಾವಣೆ ಪ್ರಕ್ರಿಯೆ ಆರಂಭ ಮಾಡಲು ಸಮಸ್ಯೆಯಿಲ್ಲ ಎಂದು ತಿಳಿಸಿರುವ ಕಾರಣ ವರ್ಗಾವಣೆ ಪ್ರಕ್ರಿಯೆ ನಿಗದಿಯಂತೆ ನಡೆಯಲಿದೆ ಎಂದು ಹೇಳಲಾಗಿದೆ.