ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂಬುದು ಕೆಲವು ವರ್ಷಗಳಿಂದ ಪ್ರಹಸನದಂತಾಗಿಬಿಟ್ಟಿತ್ತು. ಹಲವಾರು ಕಾರಣಗಳಿಂದಾಗಿ ಪ್ರತಿ ಬಾರಿಯೂ ವರ್ಗಾವಣೆ ಮುಂದೂಡಿಕೆಯಾಗುತ್ತಿದ್ದರಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕ ಸಮುದಾಯ ಅದರ ಆಸೆಯನ್ನೇ ಕೈಬಿಟ್ಟಿತ್ತು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ವರ್ಗಾವಣೆ ಕುರಿತಂತೆ ಶಿಕ್ಷಕರಲ್ಲಿ ಭರವಸೆ ಚಿಗುರೊಡೆದಿತ್ತು. ಇದಕ್ಕೆ ಪೂರಕವಾಗಿ ಸಿದ್ಧತೆಗಳು ನಡೆದಿರುವ ಸಂದರ್ಭದಲ್ಲಿ ಕೊರೊನಾ ವಕ್ಕರಿಸಿದ ಪರಿಣಾಮ ಮತ್ತೆ ಇದು ನೆನೆಗುದಿಗೆ ಬಿದ್ದಿತ್ತು.
ಆದರೆ ತಾವು ಭರವಸೆ ನೀಡಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್, ವರ್ಗಾವಣೆ ಸೇರಿದಂತೆ ಶಿಕ್ಷಕರ ಹಲವು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮೊಬೈಲ್ ಆಪ್ ‘ಶಿಕ್ಷಕ ಮಿತ್ರ’ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಇದರ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ ಈ ಆಪ್ ನಲ್ಲಿ ಶಿಕ್ಷಕರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಲಾಗಿದೆ.