ಕೊರೊನಾ ಸೋಂಕು ಹೆಚ್ಚಾಗಿದ್ದ ಕಡೆಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಒಂದು ವಾರಗಳ ಕಾಲ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಮತ್ತೆ ಒಂದು ವಾರಗಳ ಲಾಕ್ ಲಾಕ್ ಡೌನ್ ಮುಂದುವರೆಸಿದರೆ ಉತ್ತಮ ಎನ್ನುತ್ತಿದ್ದಾರೆ ಹಲವಾರು ಮಂದಿ. ಈ ವಿಚಾರವಾಗಿಯೇ ಪಾಲಿಕೆಯ ಆಯುಕ್ತರು, ಮೇಯರ್ ಸೇರಿದಂತೆ ಕೆಲವೊಬ್ಬ ಸಚಿವರು ಕೂಡ ಲಾಕ್ ಡೌನ್ ಮುಂದುವರೆಸುವಂತೆ ಸಿಎಂಗೆ ಸಲಹೆ ನೀಡಿದ್ದರೆನ್ನಲಾಗಿದೆ.
ನಿನ್ನೆ ಸಚಿವರ ಜೊತೆ ನಡೆದ ಸಭೆಯಲ್ಲೂ ಈ ವಿಚಾರ ಚರ್ಚೆಯಾಗಿದೆ. ಆದರೆ ಸಿಎಂ ಮಾತ್ರ ಲಾಕ್ ಡೌನ್ ಮುಂದುವರೆಸುವ ಕುರಿತು ಒಲವು ತೋರಿಸಿಲ್ಲ. ಈ ಮೊದಲೇ ಅವರಿಗೆ ಲಾಕ್ ಡೌನ್ ಮಾಡುವ ಬಗ್ಗೆ ಒಂದಿಷ್ಟೂ ಇಷ್ಟ ಇರಲಿಲ್ಲ. ಅನಿವಾರ್ಯವಾಗಿ ಒತ್ತಡಕ್ಕೆ ಮಣಿದು ಲಾಕ್‌ಡೌನ್ ಮಾಡಲಾಗಿತ್ತು. ಆದರೆ ಇದನ್ನು ಮುಂದುವರೆಸುವುದು ಬೇಡ ಎಂಬ ನಿರ್ಧಾರ ಸಿಎಂ ಅವರದ್ದು ಎನ್ನಲಾಗಿದೆ.
ಇನ್ನು ಲಾಕ್‌ಡೌನ್ ಮುಂದುವರೆಸಿದರೆ ಆರ್ಥಿಕವಾಗಿ ರಾಜ್ಯ ಮತ್ತಷ್ಟು ಪಾತಾಳಕ್ಕೆ ಕುಸಿಯಬೇಕಾಗುತ್ತದೆ. ಈಗಾಗಲೇ ಮೊದಲ ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಈ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಲಾಕ್ ಡೌನ್ ಒಂದು ವಾರ ಮಾಡಿದ್ದೇವೆ. ಮತ್ತೆ ಮುಂದುವರೆಸುವುದು ಸರಿಯಲ್ಲ. ಆರ್ಥಿಕತೆಗೂ ಗಮನ ನೀಡಬೇಕು. ಹೀಗೆ ಆದರೆ ಸಂಬಳ ನೀಡುವುದಕ್ಕೂ ಹಣವಿಲ್ಲದಂತೆ ಆಗುತ್ತದೆ. ಅತ್ತ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಕೂಡ ಸ್ಪಂದಿಸುತ್ತಿಲ್ಲ. ಹಾಗಾಗಿ ಲಾಕ್ ಡೌನ್ ಮುಂದುವರಿಕೆ ಬೇಡ ಎಂಬ ನಿರ್ಧಾರಕ್ಕೆ ಮುಖ್ಯಮಂತ್ರಿಗಳು ಬಂದಿದ್ದಾರೆನ್ನಲಾಗಿದೆ.