ಬೆಂಗಳೂರು: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಇಂದಿನಿಂದ 14 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡಿದ್ದು, ಕುಂಟುನೆಪಗಳನ್ನು ಹೇಳಿ ಓಡಾಟ ನಡೆಸುವವರ ಮೇಲೆ ಪೊಲೀಸರು ಹಲವೆಡೆ ಲಾಠಿ ಏಟು ಬೀಸಿದ್ದಾರೆ. ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.
ಇಂದಿನಿಂದ ಮೇ 24ರವರೆಗೆ ರಾಜ್ಯದಲ್ಲಿ ಕಂಪ್ಲೀಟ್ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ. 10 ಗಂಟೆ ಬಳಿಕ ಮನೆಯಿಂದ ಯಾರೂ ಹೊರಬರದಂತೆ ಈಗಾಗಲೇ ಖಡಕ್ ಸೂಚನೆ ಹೊರಡಿಸಲಾಗಿದೆ. ಆದರೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಟ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನಗತ್ಯ ಸಂಚಾರ ನಡೆಸಿದವರ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಪೊಲೀಸರು ಫೀಲ್ಡಿಗಿಳಿದಿದ್ದು, ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದಾರೆ. ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಬೆಳಿಗ್ಗೆಯಿಂದ ಈವರೆಗೆ 1,500 ವಾಹನಗಳನ್ನು ಸೀಜ್ ಮಾಡಿದ್ದಾರೆ. ಇನ್ನು ರಾಜ್ಯದ ಗದಗ, ಬಾಗಲಕೋಟೆ, ಕೋಲಾರ, ತುಮಕೂರು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಯಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಈ ಬಾರಿ ಜಾರಿಗೆ ತಂದಿರುವ 14 ದಿನಗಳ ಕಂಪ್ಲೀಟ್ ಲಾಕ್ ಡೌನ್ ಎಷ್ಟರ ಮಟ್ಟಿಗೆ ಪಾಲನೆಯಾಗಲಿದೆ ಕಾದುನೋಡಬೇಕು.