ಇಂದಿನಿಂದ ಬೆಂಗಳೂರಿನಲ್ಲಿ ಲಾಕ್ ಡೌನ್ ತೆರವು ಮಾಡಲಾಗಿದೆ. ಅತ್ತ ಅನ್‌ಲಾಕ್ ಆಗುತ್ತಿದ್ದಂತೆಯೇ ಜನ ರಸ್ತೆಗಿಳಿದಿದ್ದಾರೆ. ಇನ್ನು ಇಂದು ಬೆಳಗ್ಗೆ ಆರು ಗಂಟೆಯಿಂದಲೇ ನಗರದಲ್ಲಿ ಬಸ್ ಸಂಚಾರ ಆರಂಭವಾಗಿದೆ. ನಗರದಲ್ಲಿ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಉಳಿದ ಕಡೆ ಬಸ್ ಸಂಚಾರ ಆರಂಭಗೊಂಡಿದೆ.
ಇತ್ತ ಮೆಜೆಸ್ಟಿಕ್‌ನಲ್ಲಿ ಬಸ್ ಸಂಚಾರ ಆರಂಭವಾದರೂ ಕೂಡ ಇಡೀ ಬಸ್ ನಿಲ್ದಾಣದಲ್ಲಿ ಜನರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದೆ. ಕೊರೊನಾ ಭಯದಿಂದಲೇ ಜನ ಬಸ್ ನಿಲ್ದಾಣದತ್ತ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರಾ ಎಂಬ ಅನುಮಾನ ಕಾಡತೊಡಗಿದೆ. ಇನ್ನು ಇಂದು 1500 ಬಿಎಂಟಿಸಿ ಬಸ್‌ಗಳನ್ನು ಮಾತ್ರ ಬಿಡಲಾಗಿದೆ. ಪ್ರಯಾಣಿಕರಿಗನುಗುಣವಾಗಿ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡಲು ಇಲಾಖೆ ತೀರ್ಮಾನ ತೆಗೆದುಕೊಂಡಿತ್ತು.
ಇನ್ನು ಕೆಎಸ್‌ಆರ್‌ಟಿಎಸ್ ಬಸ್ ನಿಲ್ದಾಣದಲ್ಲೂ ಜನರಿಲ್ಲದೆ ಬಸ್‌ಗಳು ಖಾಲಿ ಖಾಲಿಯಾಗಿ ಸಂಚಾರ ಮಾಡುತ್ತಿವೆ. ಲಾಕ್‌ಡೌನ್‌ಗೂ ಮುನ್ನ ತಮ್ಮ ತಮ್ಮ ತವರುಗಳಿಗೆ ಗಂಟು ಮೂಟೆ ಕಟ್ಟಿಕೊಂಡು ಹೋಗುತ್ತಿದ್ದ ಜನ ಲಾಕ್‌ಡೌನ್ ನಂತರ ಆ ಉತ್ಸಾಹ ತೋರುತ್ತಿಲ್ಲ. ಇನ್ನು ಬಸ್‌ಗಳಲ್ಲಿ ಕೇವಲ ಶೇ.10 ರಷ್ಟು ಮಾತ್ರ ಜನ ಸಂಚಾರ ಮಾಡುತ್ತಿದ್ದಾರೆ.