ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಈ ಮಹಾಮಾರಿಗೆ ಈಗಾಗಲೇ ಸಾವಿರಾರು ಮಂದಿ ಬಲಿಯಾಗಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿ ಸಾವು – ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಬಹುತೇಕ ಎಲ್ಲ ರಾಜ್ಯಗಳು ಲಾಕ್ ಡೌನ್ ಜಾರಿಗೊಳಿಸಿದ್ದು, ಇದೀಗ ಕೊರೊನಾ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವ ಕಾರಣ ಕೆಲವೊಂದು ರಾಜ್ಯಗಳು ಹಂತಹಂತವಾಗಿ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸಿವೆ.
ಅಷ್ಟಕ್ಕೂ ಲಾಕ್ ಡೌನ್ ಹಾಗೂ ಅನ್ ಲಾಕ್ ಘೋಷಣೆಗೆ ಕೆಲವೊಂದು ಮಾನದಂಡಗಳಿವೆ. ಪಾಸಿಟಿವಿಟಿ ದರ ಶೇ.5 ಕ್ಕೆ ಬಂದರೆ ಮಾತ್ರ ಅನ್ ಲಾಕ್ ಮಾಡಬಹುದು ಎಂದು ಸೂಚಿಸಲಾಗಿದೆ.
ಉದಾಹರಣೆಗೆ ರಾಜ್ಯದಲ್ಲಿ ಕಳೆದ ತಿಂಗಳು ಪಾಸಿಟಿವಿಟಿ ದರ ಶೇ.30 ರಿಂದ 40 ರಷ್ಟಿತ್ತು. ಹೀಗಾಗಿ ಲಾಕ್ ಡೌನ್ ಘೋಷಿಸಲಾಗಿದ್ದು, ಇದರ ಪರಿಣಾಮವಾಗಿ ಈಗ ಪಾಸಿಟಿವಿಟಿ ದರ 10 ರೊಳಗೆ ಬಂದು ನಿಂತಿದೆ.
ಆದರೂ ಕೆಲವೊಂದು ನಗರಗಳಲ್ಲಿ ಪಾಸಿಟಿವಿಟಿ ದರ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ ಲಾಕ್ ಡೌನ್ ಜೂನ್ 14 ರ ವರೆಗೆ ವಿಸ್ತರಿಸಲಾಗಿದೆ. ಮಾರ್ಗಸೂಚಿ ಪ್ರಕಾರ ಪಾಸಿಟಿವಿಟಿ ದರ ಶೇ.5 ಕ್ಕೆ ಬಂದರೆ ಅನ್ ಲಾಕ್ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಈ ಪಾಸಿಟಿವಿಟಿ ದರ ಕನಿಷ್ಟ ಮೂರ್ನಾಲ್ಕು ದಿನಗಳ ಕಾಲವಾದರೂ ಏಕರೂಪದಲ್ಲಿರುವುದು ಅವಶ್ಯಕ.
ಆದರೆ ಲಾಕ್ ಡೌನ್ ಕಾರಣಕ್ಕೆ ಅಂದಿನ ದುಡಿಮೆಯನ್ನೇ ನೆಚ್ಚಿ ಬದುಕುತ್ತಿರುವ ಅದೆಷ್ಟೋ ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ. ಹೀಗಾಗಿ ಅನ್ ಲಾಕ್ ಯಾವಾಗ ಆರಂಭವಾಗುತ್ತದೋ ಎಂಬ ನಿರೀಕ್ಷೆಯಲ್ಲಿ ಬಹುತೇಕರಿದ್ದಾರೆ.