ಬೆಂಗಳೂರು: ರಾಜ್ಯದಲ್ಲಿ ಲವ್ ಜಿಹಾದ್ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಇದೊಂದು ಮೂರ್ಖತನದ ವಿಚಾರ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಲವ್ ಜಿಹಾದ್ ಕಾನೂನು ಜಾರಿ ಸಂವಿಧಾನ ಬಾಹಿರವಾದದ್ದು, ಬಿಜೆಪಿ ನಾಯಕರು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾರೆ. ಹಿಂದೂ-ಮುಸ್ಲಿಮರು ವಿವಾಹವಾಗಬಾರದು ಎಂದು ಹೇಳುತ್ತಾರೆ. ಮುಸ್ಲಿಮರು 600 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದಾರೆ. ಆಗಲೇ ಎಷ್ಟೋ ಸಂಬಂಧಗಳು ಬೆಳೆದುಬಿಟ್ಟಿವೆ. ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಸಾಕಷ್ಟು ಜನರು ಹುಟ್ಟಿದ್ದಾರೆ. ಈಗ ಕಾಯ್ದೆ ತರುತ್ತೇನೆ ಎಂದರೆ ಮೂರ್ಖತನ ಎಂದರು.
ಮದುವೆಯಾಗಲು ಸ್ವಾತಂತ್ರ್ಯವಿಲ್ಲವೇ? ಇದೇ ಜಾತಿ, ಧರ್ಮದವರನ್ನು ವಿವಾಹವಾಗಬೇಕು ಎಂಬುದು ಕಾನೂನಿನಲ್ಲಿ ಇಲ್ಲ. ಸಂವಿಧಾನದ ಪ್ರಕಾರ ಇಂತಹ ಕಾನೂನು ತರಲು ಅವಕಾಶವಿಲ್ಲ. ಈ ವಿಚಾರ ಕೋರ್ಟ್ ಗೆ ಹೋದರೂ ವಜಾ ಆಗುತ್ತೆ. ಹಾಗಾಗಿ ಲವ್ ಜಿಹಾದ್ ಕಾಯ್ದೆ ಜಾರಿಗೆ ನನ್ನ ವಿರೋಧವಿದೆ ಎಂದು ಹೇಳಿದರು.