ದಸರಾ ಸಂದರ್ಭದಲ್ಲಿ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ರ್ಯಾಪರ್ ಚಂದನ್ ಶೆಟ್ಟಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಆ ಬಳಿಕ ಇದು ತಣ್ಣಗಾಗಿದ್ದು, ಇದೀಗ ಮತ್ತೆ ಚಂದನ್ ಶೆಟ್ಟಿ ಹೊಸ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಚಂದನ್ ಶೆಟ್ಟಿ ವಿಡಿಯೋ ಸಾಂಗ್ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮಹದೇಶ್ವರನ ಭಕ್ತೆ ಶಿವಶರಣೆ ಸಂಕಮ್ಮ ಅವರನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ‘ಕೋಲು ಮಂಡೆ’ ಎಂಬ ಈ ಹಾಡನ್ನು ಮೂಲ ಧಾಟಿಗೆ ವಿರುದ್ಧವಾಗಿ ಹಾಡುವ ಮೂಲಕ ಮಾದಪ್ಪನ ಭಕ್ತರ ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.
ಇದಾದ ಬಳಿಕ ಎಚ್ಚೆತ್ತುಕೊಂಡ ಚಂದನ್ ಶೆಟ್ಟಿ ಕ್ಷಮೆ ಕೋರಿದ್ದಲ್ಲದೆ ಯೂಟ್ಯೂಬ್ ನಿಂದ ‘ಕೋಲು ಮಂಡೆ’ ಹಾಡನ್ನು ಹಿಂಪಡೆದುಕೊಳ್ಳಲಾಗಿತ್ತು. ಆದರೂ ಚಂದನ್ ಶೆಟ್ಟಿ ಸಂಕಷ್ಟಗಳ ಸರಮಾಲೆ ನಿಂತಂತೆ ಕಾಣುತ್ತಿಲ್ಲ. ವಿದೇಶಿ ವ್ಯಕ್ತಿಯೊಬ್ಬ ಚಂದನ್ ಶೆಟ್ಟಿ ಅವರ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ 25 ನಿಮಿಷಗಳಿಗೂ ಅಧಿಕ ಕಾಲ ಲೈವ್ ಮಾಡಿದ್ದಾನೆ. ಈ ವೇಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಶ್ಲೀಲ ಕೈಸನ್ನೆ ಮಾಡಿದ್ದು, ಈ ಲೈವ್ ವಿಡಿಯೋವನ್ನು 900ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.