ಬೆಂಗಳೂರು: ವಿದ್ಯಾಗಮ ಯೋಜನೆಗೂ ಕೊರೊನಾ ಸೋಂಕಿಗೂ ಯಾವುದೇ ಸಂಬಂಧವಿಲ್ಲ. ಯೋಜನೆ ಜಾರಿಗೂ ಮೊದಲೂ ರಾಜ್ಯದಲ್ಲಿ ಕೊರೊನಾ ಸೋಂಕು ಇತ್ತು. ಕೊವಿಡ್ ಬಂತೆಂದು ಯೋಜನೆಯನ್ನೇ ನಿಲ್ಲಿಸಲು ಆಗತ್ತಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ವಿದ್ಯಾಗಮ ಯೋಜನೆ ಬಳಿಕ ರಾಜ್ಯದಲ್ಲಿ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಾರಕವಾಗಿರುವ ಈ ಯೋಜನೆ ಸ್ಥಗಿತಕೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಈಶ್ವರಪ್ಪ, ಕೊರೊನಾ ಸೋಂಕಿನಿಂದ ರೈತರು ಮೃತಪಟ್ಟಿದ್ದಾರೆ ಎಂದು ಉಳುಮೆ ಮಾಡುವುದನ್ನೇ ನಿಲ್ಲಿಸಿ ಎಂದರೆ ಹೇಗೆ? ಕೇಂದ್ರ ಸಚಿವರು, ಸಂಸದರು ಕೂಡ ಕೊವಿಡ್ ಗೆ ಬಲಿಯಾಗುತ್ತಿದ್ದಾರೆ. ಹಾಗಂತ ಲೋಕಸಭೆಯನ್ನೇ ಮುಚ್ಚಲು ಸಾಧ್ಯವೇ? ಕೊರೊನಾ ಬಂತು ಎಂದು ಯೋಜನೆಯನ್ನು ತಕ್ಷಣ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಬೇಡ ಎಂಬ ಕಾರಣಕ್ಕೆ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದು ವಿದ್ಯಾಗಮ ಯೋಜನೆ ಜಾರಿಗೆ ತರಲಾಗಿದೆ. ಈಗ ವಿದ್ಯಾಗಮ ಯೋಜನೆಯಿಂದಾಗಿಯೇ ಕೊರೊನಾ ಬಂದು ಶಿಕ್ಷಕರು ಬಲಿಯಾಗುತ್ತಿದ್ದಾರೆ ಎಂಬುದು ತಪ್ಪು. ಈ ಯೋಜನೆಗೂ ಕೊವಿಡ್ ಗೂ ಸಂಬಂಧವಿಲ್ಲ ಎಂದು ಹೇಳಿದರು.