ಬೆಂಗಳೂರು: ಭೂ ಸುಧಾರನಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ರಾಜ್ಯದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಕಾಂಗ್ರೆಸ್ ನಾಯಕರ ಪಿತೂರಿಯಿಂದ ನಡೆಯುತ್ತಿರುವ ಪ್ರತಿಭಟನೆಗಳಾಗಿವೆ. ನನ್ನಿಂದ ರೈತ ಸಮುದಾಯಕ್ಕೆ ಎಂದೂ ಅನ್ಯಾಯವಾಗಲ್ಲ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿದಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ರೈತನ ಮಗನಾಗಿ, ರೈತರ ಆಶೀರ್ವಾದದಿಂದ ನಾಲ್ಕನೇ ಬಾರಿ ಸಿಎಂ ಆಗಿ ಅಧಿಕಾರದಲ್ಲಿದ್ದೇನೆ. ನನ್ನಿಂದ ರೈತ ವರ್ಗಕ್ಕೆ ಯಾವುದೇ ಅನ್ಯಾಯವಾಗಲು ಬಿಡಲ್ಲ. ಅನ್ನದಾತರ ಹಿತದೃಷ್ಟಿಯಿಂದ ವಿಧಾನಮಂಡಲದಲ್ಲಿ ಚರ್ಚೆಯಾದ ಮೇಲೆ ಈ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ನನ್ನ ಬೆಳೆ ನನ್ನ ಹಕ್ಕು ಎಂಬ ಘೋಷ ವಾಕ್ಯದಡಿ ರೈತರು ತಮ್ಮ ಕೃಷಿ ಉತ್ಪನ್ನವನ್ನು ದೇಶದ ಯಾವುದೇ ಭಾಗಕ್ಕೆ ಹೋಗಿ ಮಾರಾಟ ಮಾಡಬಹುದು. ಎಲ್ಲಿ ಉತ್ತಮ ಬೆಲೆ ಸಿಗುತ್ತೋ ಅಲ್ಲಿ ರೈತರು ತಮ್ಮ ಬೆಳೆ ಮಾರಾಟ ಮಾಡಬಹುದು. ಹಾಗೆಂದು ನಾವು ಎಪಿಎಂಸಿ ಮುಚ್ಚುವುದಿಲ್ಲ. ರೈತರಿಗೆ ದಲ್ಲಾಳಿಗಳ ಹಾವಳಿ ತಪ್ಪಲಿದೆ ಎಂದು ಹೇಳಿದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು. ನೀರಾವರಿ ಭೂಮಿಯನ್ನು ಕೃಷಿ ಚಟುವಟಿಕೆಗಳಿಗೆ ಮಾತ್ರ ಉಪಯೋಗಿಸಬೇಕು. ನೀರಾವರಿಯಿಲ್ಲದ ಭೂಮಿಯನ್ನು ಕೈಗಾರಿಕೆಗೆ ಬಳಸಬಹುದು. ಸಣ್ಣ ಹಿಡುವಳಿ, ಅತಿ ಸಣ್ಣ ಹಿಡುವಳಿದಾರರಿಗೆ ಈ ಕಾನೂನಿನ ಪ್ರಕಾರ ಯಾವುದೇ ತೊಂದರೆ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಕಾನೂನು ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ ಹೊರತು ಯಾವುದೇ ಅನ್ಯಾಯವಾಗಲ್ಲ. ಅನಗತ್ಯವಾಗಿ ಗೊಂದಲಕ್ಕೀಡಾಗಿ ರೈತರು ತಪ್ಪು ತಿಳುವಳಿಕೆಯಲ್ಲಿರುವುದು ಬೇಡ ಎಂದು ತಿಳಿಸಿದರು.