ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೈಹಾಕಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೇನುಗೂಡಿಗೆ ಕಲ್ಲೆಸೆದ ಸ್ಥಿತಿ ಎದುರಿಸುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಹಳಬರನ್ನು ಕೈಬಿಟ್ಟರೆ ಬಂಡಾಯವೇಳುವ ಸಾಧ್ಯತೆ….ಹೊಸಬರಿಗೆ ಮಣೆಹಾಕದಿದ್ದರೆ ನಮ್ಮದಾರಿ ನಮಗೆ ಎಂದು ಎಚ್ಚರಿಕೆ ಸಂದೇಶ…..ಹೀಗಾಗಿ ಸಂಪುಟ ವಿಸ್ತರಣೆ ವಿಚಾರ ಸಿಎಂ ಯಡಿಯೂರಪ್ಪನವರಿಗೆ ತಲೆಬಿಸಿಗೆ ಕಾರಣವಾಗಿದೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ ರೇಣುಕಾಚಾರ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿಯಾಗಿ ಲಾಬಿ ನಡೆಸಿದ್ದಾರೆ. ಭೇಟಿ ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆಯಾಗಿ ಒಂದುವರೆ ವರ್ಷವಾಗಿದೆ. ಹಾಗಾಗಿ ಕೆಲವರನ್ನು ಕೈಬಿಟ್ಟು 3-4 ಬಾರಿ ಶಾಸಕರಾದವರನ್ನು ಮಂತ್ರಿ ಮಾಡಬೇಕಾಗುತ್ತದೆ. ನನಗೆ ಮಂತ್ರಿ ಸ್ಥಾನ ನೀಡಿ ಎಂದು ಕೇಳಿಲ್ಲ, ಆದರೆ ಹಲವು ಬಾರಿ ಶಾಸಕರಾದವರನ್ನು ಮಂತ್ರಿಯನ್ನಾಗಿ ಮಾಡಿ. ಮುಂಬರುವ ಬೈ ಎಲೆಕ್ಷನ್ ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಕಟಿಲು ಅವರಿಗೆ ತಿಳಿಸಿದ್ದೇನೆ. ಇನ್ನೂ ಸಿಎಂ ಯಡಿಯೂರಪ್ಪನವರಿಗೂ ಈ ವಿಷಯ ಹೇಳುತ್ತೇನೆ ಎಂದಿದ್ದಾರೆ.
ಇದೇ ವೇಳೆ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ರಾಮ ರಾಮ ಎಂದು ಹೇಳ್ತಾ ಹೋದರೆ ಅದು ರಾವಣ ಆಗುತ್ತೆ. ಯಾವುದನ್ನು ಎಲ್ಲಿಗೆ ಮುಟ್ಟಿಸಬೇಕೋ ಅದನ್ನು ಮುಟ್ಟಿಸಿದ್ದೇನೆ. ನನ್ನ ಬಾಯಲ್ಲಿ ಅವರ ಹೆಸರನ್ನು ಹೇಳಲ್ಲ ಎಂದು ಗರಂ ಆದರು.